ಮಡಿಕೇರಿ: ಒತ್ತುವರಿ ಭೂಮಿ ತೆರವಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ

ಹೊಸದಿಗಂತ ವರದಿ, ಮಡಿಕೇರಿ:
ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಸರಕಾರಿ ಭೂಮಿಯನ್ನು ತೆರವುಗೊಳಿಸಿ ಭೂಹೀನರಿಗೆ ಹಂಚಿಕೆ ಮಾಡಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಮಿತಿಯ ಪ್ರಮುಖರು ಬೇಡಿಕೆಯ ಈಡೇರಿಕೆಗಾಗಿ ಒತ್ತಾಯಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ಹೆಚ್.ಆರ್.ಶಿವಣ್ಣ ಮಾತನಾಡಿ, ಭೂಮಾಲಕರಿಗೆ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡುವ ಕ್ರಮವನ್ನು ಕೈಬಿಡಬೇಕು, ಜಿಲ್ಲೆಯಲ್ಲಿ ಮಳೆಗಾಲದಲ್ಲಿ ವಿದ್ಯುತ್ ಅಭಾವವಿರುವುದರಿಂದ ಬಿಪಿಎಲ್ ಕಾರ್ಡ್‍ದಾರರಿಗೆ ಸೀಮೆಎಣ್ಣೆ ವಿತರಿಸಬೇಕು, ಶಿಕ್ಷಣ ತಜ್ಞರಲ್ಲದ ರೋಹಿತ್ ಚಕ್ರವರ್ತಿ ಅಧ್ಯಕ್ಷತೆಯ ಸಮಿತಿಯಿಂದ ಪರಿಷ್ಕರಣೆಗೊಂಡ ಪಠ್ಯಪುಸ್ತಕಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಪ.ಜಾತಿ ಮತ್ತು ಪ.ಪಂ ವರ್ಗಗಳಿಗೆ ಕಾಯ್ದಿರಿಸಿರುವ ಎಸ್‍ಸಿಎಸ್‍ಪಿ /ಟಿಎಸ್‍ಪಿ ಹಣದ ದುರುಪಯೋಗವನ್ನು ತಡೆಯಬೇಕು. ಕಾಯ್ದೆಯಲ್ಲಿರುವ ದಲಿತ ವಿರೋಧಿ ಸೆಕ್ಷನ್ 7(ಡಿ) ರದ್ದಾಗಬೇಕು, ಪಿಟಿಸಿಎಲ್ ಕಾಯ್ದೆ ತಿದ್ದುಪಡಿಯಾಗಬೇಕು. ಇತರರು ಪಡೆದಿರುವ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ತಡೆಹಿಡಿಯಲಾಗಿರುವ ವಿದ್ಯಾರ್ಥಿ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಹಾಸ್ಟೆಲ್‍ಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು ಮತ್ತು ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಿಲ್ಲಾ ಉಪಾಧ್ಯಕ್ಷ ಎಚ್.ಜಿ.ಗೋಪಾಲ್, ತಾಲೂಕು ಸಂಚಾಲಕ ಎಚ್.ಬಿ.ಲವ, ಪ್ರಮುಖರಾದ ಮಹದೇವ್, ಮೋಹನ್, ಸುರೇಶ್, ರೇಣುಕ, ನಾಣಯ್ಯ, ಅನಂತ್, ರಮೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!