ಮಡಿಕೇರಿ-ಗೋಣಿಕೊಪ್ಪ‌ ದಸರಾ: ವಾಹನ ಸಂಚಾರ ನಿಲುಗಡೆಯಲ್ಲಿ ಬದಲಾವಣೆ

ಹೊಸದಿಗಂತ ವರದಿ ಮಡಿಕೇರಿ:

ಬುಧವಾರ ರಾತ್ರಿ ಮಡಿಕೇರಿ ನಗರ ಹಾಗೂ ಗೋಣಿಕೊಪ್ಪ ಪಟ್ಟಣದಲ್ಲಿ ನಡೆಯಲಿರುವ ದಸರಾ ಉತ್ಸವದ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಮಡಿಕೇರಿ ನಗರ ಮತ್ತು ಗೋಣಿಕೊಪ್ಪ ಪಟ್ಟಣದಲ್ಲಿ ಅಂದು ಸಂಜೆ 4ಗಂಟೆಯಿಂದ ಗುರುವಾರ ಬೆಳಗ್ಗೆ 8ಗಂಟೆಯವರೆಗೆ ಅನ್ವಯವಾಗುವಂತೆ ವಾಹನ ಸಂಚಾರ ಹಾಗೂ ವಾಹನ ನಿಲುಗಡೆಯಲ್ಲಿ ಬದಲಾವಣೆ ಮಾಡಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಅವರು ಆದೇಶ ಹೊರಡಿಸಿದ್ದಾರೆ.

ಅದರಂತೆ ಮಡಿಕೇರಿಯ ದಸರಾ ಉತ್ಸವಕ್ಕೆ ಮೈಸೂರು ರಸ್ತೆ ಕಡೆಯಿಂದ ಮತ್ತು ಸೋಮವಾರಪೇಟೆ ಕಡೆಯಿಂದ ಬರುವ ವಾಹನಗಳು ಸಂಪಿಗೆ ಕಟ್ಟೆ ಕಡೆಯಿಂದ ಎ.ವಿ.ಶಾಲೆ, ಮುತ್ತಪ್ಪ ದೇವಸ್ಥಾನ ಮಾರ್ಗವಾಗಿ ಸೆಂಟ್ ಜೋಸೆಫ್ ಕಾನ್ವೆಂಟ್ ಮೈದಾನದಲ್ಲಿ ವಾಹನ ನಿಲುಗಡೆಗೊಳಿಸುವುದು. ಮುಂದುವರೆದು ಎಸ್.ಪಿ ಕಚೇರಿ ಜಂಕ್ಷನ್, ಮುಂದೆ ಐಟಿಐ ಜಂಕ್ಷನ್ ಕಡೆಯಿಂದ ಎಫ್.ಎಂ.ಸಿ ಕಾಲೇಜು ಮೈದಾನದಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು.

ಸಿದ್ದಾಪುರ, ವೀರಾಜಪೇಟೆ, ಮೂರ್ನಾಡು ಮತ್ತು ಮಂಗಳೂರು ಕಡೆಯಿಂದ ಬರುವ ವಾಹನಗಳನ್ನು ಆರ್.ಎಂ.ಸಿ ಯಾರ್ಡ್ ಮೈದಾನದಲ್ಲಿ ನಿಲುಗಡೆ ಮಾಡುವುದು. ಮುಂದುವರೆದು ಚೈನ್‍ಗೇಟ್ ಮೂಲಕ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ನಿಲುಗಡೆಗೊಳಿಸುವುದು.
ಗಾಳಿಬೀಡು ಅಬ್ಬಿಪಾಲ್ಸ್, ಕಾಲೂರು ಕಡೆಯಿಂದ ಬರುವ ವಾಹನಗಳು ಎಫ್.ಎಂ.ಸಿ ಕಾಲೇಜು ಮೈದಾನದಲ್ಲಿ ನಿಲುಗಡೆಗೊಳಿಸುವುದು.

ಮೈಸೂರು, ಸಿದ್ದಾಪುರ, ಮಂಗಳೂರು ಕಡೆಯಿಂದ ಬರುವ ದ್ವಿಚಕ್ರ ವಾಹನಗಳ ನಿಲುಗಡೆಗೆ ಮೈಸೂರು ರಸ್ತೆಯ ಈಸ್ಟ್ ಎಂಡ್ ಹೋಟೆಲ್ ಮುಂಭಾಗದಲ್ಲಿರುವ ಶಾಂತಿ ಚರ್ಚ್ ಮೈದಾನದಲ್ಲಿ ನಿಲುಗಡೆ ಮಾಡುವುದು.
ನಗರದಲ್ಲಿರುವ ಗಣಪತಿ ಬೀದಿ, ಮಹದೇವಪೇಟೆ ನಿವಾಸಿಗಳು ತಮ್ಮ ವಾಹನಗಳನ್ನು ಕ್ರಸೆಂಟ್ ಶಾಲೆಯ ಮೈದಾನದಲ್ಲಿ ನಿಲುಗಡೆಗೊಳಿಸುವುದು.
ಕಾಲೇಜು ರಸ್ತೆ, ಕೊಹಿನೂರು ರಸ್ತೆ ಮತ್ತು ನಗರದ ಮದ್ಯಭಾಗದಲ್ಲಿರುವ ಸಾರ್ವಜನಿಕರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸದೆ ಹಿಂದುಸ್ಥಾನಿ ಶಾಲೆಯ ಮೈದಾನದಲ್ಲಿ ನಿಲುಗಡೆಗೊಳಿಸುವುದು.
ವಾಹನ ಸಂಚಾರ ನಿಷೇಧ: ಅ.5ರ ಸಂಜೆ 4 ಗಂಟೆಯಿಂದ 6ರ ಬೆಳಗ್ಗೆ 8 ಗಂಟೆಯವರೆಗೆ ನಗರದೊಳಗೆ ವಾಹನ ಸಂಚಾರವನ್ನು ನಿಷೇಧಿಸುವುದರೊಂದಿಗೆ ನಗರದೊಳಗೆ ಇರುವ ಎಲ್ಲಾ ರಸ್ತೆಗಳನ್ನು ನಿಲುಗಡೆ ರಹಿತ ರಸ್ತೆಗಳೆಂದು ಘೋಷಿಸಲಾಗಿದೆ.

ಡಿಪೋದಲ್ಲೇ ನಿಲ್ದಾಣ: ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ತಾತ್ಕಾಲಿಕವಾಗಿ ಕೆಎಸ್‍ಆರ್‍ಟಿಸಿ ಡಿಪೋವನ್ನೇ ಬಸ್ಸು ನಿಲ್ದಾಣವಾಗಿ ಮಾರ್ಪಾಡಿಸಿಕೊಳ್ಳುವುದು. ಅವಶ್ಯವಿದ್ದಲ್ಲಿ ಆರ್.ಎಂ.ಸಿ. ಯಾರ್ಡ್’ನ್ಮು ಬಳಸಿಕೊಳ್ಳುವುದು. ಮತ್ತು ನಗರದೊಳಗೆ ಸಂಚರಿಸದಂತೆ ವ್ಯವಸ್ಥೆ ಮಾಡಿಕೊಳ್ಳುವುದು. ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣವನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ವಾಹನ ನಿಲ್ಲಿಸಲು ಅನುವು ಮಾಡಿಕೊಡುವುದು.
ಖಾಸಗಿ ಬಸ್ಸುಗಳು ನಗರದೊಳಗೆ ಆಗಮಿಸದೇ ಜಿಟಿ ವೃತ್ತದಲ್ಲಿಯೇ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿ ತೆರಳುವುದು. ಮತ್ತು ಖಾಸಗಿ ಬಸ್ಸು ನಿಲ್ದಾಣವನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ವಾಹನ ನಿಲ್ಲಿಸಲು ಅನುವು ಮಾಡಿಕೊಡುವುದು

ಗೋಣಿಕೊಪ್ಪ ಪಟ್ಟಣ: ಗೋಣಿಕೊಪ್ಪ ಪಟ್ಟಣಕ್ಕೆ ವೀರಾಜಪೇಟೆ ಕಡೆಯಿಂದ ಬರುವ ವಾಹನಗಳನ್ನು ಮೈಸೂರು ಕಡೆಗೆ ಹೋಗಲು ಕೈಕೇರಿ ಕಳತ್ಮಾಡ್ ಜಂಕ್ಷನ್‍ನಿಂದ ಅತ್ತೂರು ಜಂಕ್ಷನ್‍ಗಾಗಿ ಪಾಲಿಬೆಟ್ಟ ರಸ್ತೆಗೆ ಬಂದು ಮೈಸೂರು ರಸ್ತೆಗೆ ಸೇರಿ ಹೋಗುವುದು.

ಮೈಸೂರು ಕಡೆಯಿಂದ ಬರುವ ವಾಹನಗಳನ್ನು ವೀರಾಜಪೇಟೆ ಕಡೆಗೆ ಹೋಗಲು ತಿತಿಮತಿಯಿಂದ ಪಾಲಿಬೆಟ್ಟ-ಅಮ್ಮತ್ತಿ ಮಾರ್ಗವಾಗಿ ವೀರಾಜಪೇಟೆಗೆ ಹೋಗುವುದು.
ಪೊನ್ನಂಪೇಟೆ ಕಡೆಯಿಂದ ಮೈಸೂರು ಕಡೆಗೆ ಹೋಗುವ ವಾಹನಗಳು ಪೊನ್ನಂಪೇಟೆಯಿಂದ ಪೊನ್ನಪ್ಪಸಂತೆ-ಕೋಣನಕಟ್ಟೆ-ತಿತಿಮತಿ ಮಾರ್ಗವಾಗಿ ಹೋಗುವುದು.

ಅದೇ ರೀತಿ ಮೈಸೂರಿನಿಂದ ಪೊನ್ನಂಪೇಟೆ, ಶ್ರೀಮಂಗಲ ಕಡೆ ಹೋಗುವ ವಾಹನಗಳು ತಿತಿಮತಿ- ಕೋಣನಕಟ್ಟೆ-ಪೊನ್ನಪ್ಪಸಂತೆ-ನಲ್ಲೂರು-ಕಿರುಗೂರು ಮಾರ್ಗವಾಗಿ ಹೋಗುವುದು.
ವೀರಾಜಪೇಟೆಯಿಂದ ಪೊನ್ನಂಪೇಟೆ, ಶ್ರೀಮಂಗಲ ಕಡೆಗೆ ಹೋಗುವ ವಾಹನಗಳು ಹಾತೂರು ಜಂಕ್ಷನ್‍ನಿಂದ ಕುಂದ ಮಾರ್ಗವಾಗಿ ಪೊನ್ನಂಪೇಟೆ ಕಡೆಗೆ ಹೋಗುವುದು.
ಪೊನ್ನಂಪೇಟೆ ಕಡೆಯಿಂದ ವೀರಾಜಪೇಟೆಗೆ ಹೋಗುವ ವಾಹನಗಳು ಕುಂದ, ಹಾತೂರು ಮಾರ್ಗವಾಗಿ ಹೋಗುವುದು.

ವಾಹನ ನಿಲುಗಡೆ ಸ್ಥಳಗಳು: ವೀರಾಜಪೇಟೆ ಕಡೆಯಿಂದ ಬರುವ ವಾಹನಗಳನ್ನು ಕಾವೇರಿ ಕಾಲೇಜು ಮೈದಾನದಲ್ಲಿ ನಿಲ್ಲಿಸುವುದು.
ಮೈಸೂರು ಕಡೆಯಿಂದ ಬರುವ ವಾಹನಗಳನ್ನು ಆರ್.ಎಂ.ಸಿ ಆವರಣದ ಒಳಭಾಗದಲ್ಲಿ ನಿಲ್ಲಿಸುವುದು.
ಪಾಲಿಬೆಟ್ಟ ರಸ್ತೆ ಕಡೆಯಿಂದ ಬರುವ ವಾಹನಗಳನ್ನು ಕಾಪ್ಸ್ ಶಾಲೆ ಪ್ರವೇಶದ್ವಾರ ರಸ್ತೆಯಿಂದ ಹಿಂದಕ್ಕೆ ರಸ್ತೆ ಬದಿಯಲ್ಲಿ ನಿಲ್ಲಿಸುವುದು.
ಪೊನ್ನಂಪೇಟೆ ಕಡೆಯಿಂದ ಬರುವ ವಾಹನಗಳನ್ನು ರುದ್ರಭೂಮಿಯ ಹಿಂದಕ್ಕೆ ಪೊನ್ನಂಪೇಟೆ ರಸ್ತೆಯ ಬದಿಯಲ್ಲಿ ನಿಲ್ಲಿಸುವುದು.

ಮದ್ಯ ಮಾರಾಟ ನಿಷೇಧ: ದಸರಾ ಹಿನ್ಮೆಲೆಯಲ್ಲಿ ಅ.5ರ ಸಂಜೆ 5 ಗಂಟೆಯಿಂದ 6ರಂದು ಬೆಳಗ್ಗೆ 10 ಗಂಟೆಯವರೆಗೆ ಮಡಿಕೇರಿ ನಗರ, ಪೊನ್ನಂಪೇಟೆ ಮತ್ತು ಗೋಣಿಕೊಪ್ಪ ಠಾಣಾ ಸರಹದ್ದಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ಹೊಟೇಲ್ ಮತ್ತು ಕ್ಲಬ್’ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!