ಹೊಸದಿಗಂತ ವರದಿ, ಮಡಿಕೇರಿ:
ಭಾರತ ಚೀನಾ ಗಡಿಭಾಗದ ಜಮ್ಮು ಕಾಶ್ಮೀರದ ಲಡಾಕ್’ನಲ್ಲಿ ಹುತಾತ್ಮರಾದ ಯೋಧರಿಗೆ ಸುಂಟಿಕೊಪ್ಪದಲ್ಲಿ ಭಾವಪೂರ್ಣ ನಮನ ಸಲ್ಲಿಸಲಾಯಿತು.
ಬಾಲಪ್ರತಿಭೆ, ವಾಗ್ಮಿ ವಿದ್ಯಾರ್ಥಿನಿ ಶ್ರೀಶಾ ಅವರ ತಂದೆ ಸಿಜು ಹಾಗೂ ತಾಯಿ ಸಂಧ್ಯಾ ಅವರು ಆಯೋಜಿಸಿದ್ದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ದೇಶದ ಹುತಾತ್ಮ ಯೋಧರನ್ನು ಸ್ಮರಿಸಲಾಯಿತು.
ಮಾದಾಪುರದ ಕ್ಯಾಪ್ಟನ್ ಬೋಪಣ್ಣ ಮಾತನಾಡಿ, ತಮ್ಮ ಸೈನಿಕ ವೃತ್ತಿಯ 30 ವರ್ಷಗಳಲ್ಲಿ 15 ವರ್ಷಗಳನ್ನು ಕಾಶ್ಮೀರದಲ್ಲೇ ಕಳೆದು ಹಿಮಗಡ್ಡೆ ಪ್ರದೇಶದಲ್ಲಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸಿದ ಬಗ್ಗೆ ಮೆಲುಕು ಹಾಕಿದರು. ದೇಶದ ಯೋಧರನ್ನು ಸರ್ವರೂ ಗೌರವಿಸಬೇಕೆಂದು ಕರೆ ನೀಡಿದರು.
ಸುಂಟಿಕೊಪ್ಪ ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಮಾತನಾಡಿ, ಪ್ರತಿಯೊಬ್ಬ ಯೋಧ ಈ ದೇಶದ ಬಹುದೊಡ್ಡ ಆಸ್ತಿಯಾಗಿದ್ದಾರೆ. ಯುದ್ಧ ಭೂಮಿಗೆ ತೆರಳುವಾಗ ಓರ್ವ ಯೋಧ ತಂದೆ, ತಾಯಿ, ಸಹೋದರಿ, ಸಹೋದರ, ಪತ್ನಿಗೆ ಪತ್ರ ಬರೆದು ನಾನು ನಾಳೆ ಸೂರ್ಯೋದಯ ಆಗಮಿಸುವುದನ್ನು ಕಾಣಲು ಸಾಧ್ಯವಾಗದೇ ಇರಬಹುದು. ಚಿರನಿದ್ರೆಗೆ ಜಾರಿದರೂ ನೀವು ಕಣ್ಣೀರು ಹಾಕಬಾರದು. ದೇಶಕ್ಕಾಗಿ ವೀರ ಮರಣವನ್ನಪ್ಪಬಹುದು ಎಂಬ ಭಾವನಾತ್ಮಕ ಪತ್ರ ಬರೆದಿದ್ದನ್ನು ನೆನಪಿಸಿದರು.
ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಶ್ರೀಶಾ, ಭಾರತ ದೇಶದ ಲಡಾಕ್ ಯುದ್ಧದ ಯೋಧರ ಯಶೋಗಾಥೆಯನ್ನು ನಿರರ್ಗಳವಾಗಿ ಪ್ರಚುರಪಡಿಸಿದ್ದನ್ನು ಸಭಿಕರು ಮುಕ್ತಕಂಠದಿಂದ ಪ್ರಶಂಸಿದರು.
ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷೆ ಶಿವಮ್ಮ ಕಾರ್ಯಕ್ರಮ ಉದ್ಘಾಟಿಸಿದರು.
ಸದಸ್ಯರಾದ ಆಲಿಕುಟ್ಟಿ, ಶಬ್ಬೀರ್, ರಫೀಕ್‍ಖಾನ್, ವಸಂತಿ, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ವಾಹನ ಚಾಲಕರ ಸಂಘದ ಪ್ರಮುಖರು ಉಪಸ್ಥಿತರಿದ್ದರು. ಶ್ರೀಶಾ ಅವರ ತಾಯಿ ಸಂಧ್ಯಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ