October 11, 2026
Sunday, October 11, 2026
spot_img

ನೆಮ್ಮದಿಯ ನಿಟ್ಟುಸಿರು ಬಿಟ್ಟ ಮಡಿಕೇರಿ ಜನತೆ : ಕೃಷಿ ಫಸಲು ನಾಶಪಡಿಸಿದ್ದ ಮತ್ತೊಂದು ಆನೆ ಸೆರೆ

ಹೊಸದಿಗಂತ ವರದಿ ಮಡಿಕೇರಿ:

ವೀರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಡೂರು ಪ್ರದೇಶದಲ್ಲಿ ಕೃಷಿ ಫಸಲು ನಾಶಪಡಿಸಿ, ಸಾರ್ವಜನಿಕರ ಮೇಲೆ ದಾಳಿಗೆ ಮುಂದಾಗುತ್ತಿದ್ದ ಸುಮಾರು 38 ವರ್ಷದ ಗಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಮತ್ತೊಮ್ಮೆ ಯಶಸ್ವಿಯಾಗಿದೆ.

ಬುಧವಾರ ಚೆಂಬೆಬೆಳ್ಳೂರಿನಲ್ಲಿ 33 ವರ್ಷದ ಕಾಡಾನೆಯೊಂದನ್ನು ಸೆರೆ ಹಿಡಿದು ಗುರುವಾರ ತಾತ್ಕಾಲಿಕ ಬಿಡುವು ನೀಡಿದ್ದ ತಂಡ, ಶುಕ್ರವಾರ ಮತ್ತೆ ಕಾರ್ಯಾಚರಣೆ ನಡೆಸಿ ಯಡೂರು ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ ಮತ್ತೊಂದು ಕಾಡಾನೆಗೆ ಅರವಳಿಕೆ ನೀಡಿ ಸೆರೆ ಹಿಡಿದಿದೆ.

ನೆಮ್ಮದಿಯ ನಿಟ್ಟುಸಿರುವ ಬಿಟ್ಟ ಮಡಿಕೇರಿ ಜನತೆ

ದುಬಾರೆ ಶಿಬಿರದ ಕ್ಯಾಪ್ಟನ್ ಸುಗ್ರೀವ ನೇತೃತ್ವದ 5 ಸಾಕಾನೆಗಳು ಮತ್ತು 200ಕ್ಕೂ ಅಧಿಕ ಆರ್.ಆರ್.ಟಿ ಹಾಗೂ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆನೆ ಸೆರೆಯಾಗಿರುವ ವಿಷಯ ತಿಳಿದ ತಕ್ಷಣ ಕಣ್ಣಂಗಾಲ ಗ್ರಾಮದ ಸುತ್ತಮುತ್ತಲ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆ ಸಿಕ್ಕ ಆನೆಯನ್ನು ವಿಶೇಷ ವಾಹನಕ್ಕೇರಿಸುವ ದೃಶ್ಯ ವೀಕ್ಷಿಸಲು ನೂರಾರು ಮಂದಿ ನೆರೆದಿದ್ದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಠಿ, ಡಿಎಫ್ಒ ವಿನುತಾ ಚೌಹಾಣ್, ಎಸಿಎಫ್ ತಹಸೀಲ್ ಬಾನು ನೇತೃತ್ವದಲ್ಲಿ ಅರಣ್ಯಾಧಿಕಾರಿಗಳಾದ ಶಿವರಾಂ, ಮನೋಜ್, ದೇವರಾಜ್, ಶಶಿ, ಪ್ರಶಾಂತ್, ಸುನಿಲ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.

ಬುಧವಾರ 33 ವರ್ಷದ ಕಾಡಾನೆ ಸೆರೆ

ಕೃಷಿ ನಾಶ ಪಡಿಸಿ, ಮಾನವ ಪ್ರಾಣ ಹಾನಿಗೆ ಕಾರಣವಾಗಿರುವ ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರದಿಂದ ಆದೇಶ ನೀಡಲಾಗಿದೆ. ಈಗಾಗಲೇ ಬುಧವಾರ 33 ವರ್ಷದ ಕಾಡಾನೆಯನ್ನು ಸೆರೆ ಹಿಡಿದು ದುಬಾರೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದ್ದು, ಶುಕ್ರವಾರ ಮತ್ತೆ ಕಾರ್ಯಾಚರಣೆ ನಡೆಸಿ 38 ವರ್ಷದ ಮತ್ತೊಂದು ಕಾಡಾನೆಯನ್ನು ಯಶಸ್ವಿಯಾಗಿ ಸೆರೆ ಹಿಡಿದು ದುಬಾರೆಗೆ ಸ್ಥಳಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸುಮಾರು 200ಕ್ಕೂ ಅಧಿಕ ಸಿಬ್ಬಂದಿಗಳು ಭಾಗಿಯಾಗಿದ್ದರು ಎಂದು ವೀರಾಜಪೇಟೆ ಅರಣ್ಯ ವಲಯದ ಡಿಎಫ್ಒ ವಿನುತಾ ಚೌಹಾಣ್ ಅವರು ತಿಳಿಸಿದ್ದಾರೆ.

ಶನಿವಾರ ಹಾಗೂ ಭಾನುವಾರ ಬಿಡುವಿನ ಬಳಿಕ ಸೋಮವಾರ ಮತ್ತೆ ಕಾರ್ಯಾಚರಣೆ ಮುಂದುವರೆಸಿ ಮತ್ತೊಂದು ಕಾಡಾನೆಯನ್ನು ಸೆರೆಹಿಡಿಯಲಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

Must Read