ಹಂಪಿ ಉತ್ಸವದ ಮಾದರಿಯಲ್ಲಿ ಮದಕರಿ ನಾಯಕ ಉತ್ಸವ: ಬಿ.ಎಸ್.ಯಡಿಯೂರಪ್ಪ

ಹೊಸದಿಗಂತ ವರದಿ,ಚಿತ್ರದುರ್ಗ :

ಮುಂದಿನ ದಿನಗಳಲ್ಲಿ ಚಿತ್ರದುರ್ಗದಲ್ಲಿ ಹಂಪಿ ಉತ್ಸವದ ಮಾದರಿಯಲ್ಲಿ ರಾಜಾವೀರ ಮದಕರಿ ನಾಯಕರ ಉತ್ಸವ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶ್ವಾಸನೆ ನೀಡಿದರು.

ನಗರದ ಎಸ್.ಜಿ.ಕನ್ವೆನ್ಷನ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎನ್‌ಡಿಎ ಅಭ್ಯರ್ಥಿ ಬೆಂಬಲಿತ ವೀರಶೈವ ಲಿಂಗಾಯತ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ತಪ್ಪದೇ ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳ ಅವರಿಗೆ ಮತ ನೀಡಬೇಕು. ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸಿ ಡೆಲ್ಲಿಗೆ ಕಳಿಸಬೇಕು. ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಿದರೆ ನನ್ನನ್ನೇ ಗೆಲ್ಲಿಸಿದಂತೆ ಎಂದರು.

ಭದ್ರಾ ಮೇಲ್ದಂಡೆಗೆ ೫,೩೦೦ ಕೋಟಿ ರೂ. ಕೊಡಿಸುತ್ತೇನೆ. ಅಲ್ಲದೇ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಇತರೆ ಯೋಜನೆಗಳಿಗೆ ವೇಗ ನೀಡಲಾಗುವುದು. ಜಿಲ್ಲೆಯಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯಬೇಕಿದೆ. ಹಾಗಾಗಿ ಬಿಜೆಪಿ ಬೆಂಬಲಿಸಬೇಕು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದ ಅವರು, ನನಗೆ ೮೨ ವರ್ಷವಾದರೂ ರಾಜ್ಯದ ಉದ್ದಗಲಕ್ಕೂ ಓಡಾಡುತ್ತಿದ್ದೇನೆ. ದೇವರು ಶಕ್ತಿ ಕೊಟ್ಟರೆ ಮುಂದಿನ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ ನಡೆಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು. ನರೇಂದ್ರ ಮೋದಿ ಎದುರು ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳುತ್ತಿಲ್ಲ. ಇದರರ್ಥ ಚುನಾವಣೆಗೆ ಮೊದಲು ಅವರು ಸೋತಿದ್ದಾರೆ. ರೈತರಿಗೆ ನಾನು ೪೦೦೦ ರೂ. ಕೊಡುತ್ತಿದ್ದೆ. ಹಾಲು ಉತ್ಪಾದಕರ ಪ್ರೋತ್ಸಾಹ ಧನ, ಭಾಗ್ಯಲಕ್ಷ್ಮಿ ಯೋಜನೆ ನಿಲ್ಲಿಸುವ ಮೂಲಕ ಕಾಂಗ್ರೆಸ್ ರೈತ ವಿರೋಧಿಯಾಗಿದೆ. ಹಣ, ಹೆಂಡದ ಬಲದಿಂದ ಚುನಾವಣೆ ನಡೆಸುವ ಕಾಲ ಈಗಿಲ್ಲ. ಜನ ಜಾಗೃತರಾಗಿದ್ದಾರೆ. ಹಾಗಾಗಿ ಇನ್ನು ಮುಂದೆ ನಿಮ್ಮ ನಿಮ್ಮ ದೊಂಬರಾಟ ನಡೆಯುವುದಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ – ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಾಲು – ಜೇನಿನಂತೆ ಕೂಡಿ ಮುಂದೆಯೂ ಕೆಲಸ ಮಾಡಿಕೊಂಡು ಹೋಗುತ್ತೇವೆ. ನಮ್ಮ ಹೊಂದಾಣಿಕೆ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಪರವಾದ ವಾತಾವರಣ ಇದೆ. ಗೋವಿಂದ ಕಾರಜೋಳ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ. ಅದರಂತೆ ರಾಜ್ಯದಲ್ಲಿ ಎಲ್ ೧೮ ಕ್ಷೇತ್ರಗಳಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳು ಗೆಲುವು ಪಡೆಯಲಿದ್ದಾರೆ ಎಂದು ಹೇಳಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎನ್‌ಡಿಎ ಬೆಂಬಲಿತ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, ಕಳೆದ ೨೦ ವರ್ಷಗಳಿಂದ ಯಡಿಯೂರಪ್ಪ ನನ್ನನ್ನು ಒಡಹುಟ್ಟಿದ ಸಹೋದರನಂತೆ ಈ ಹಂತಕ್ಕೆ ಬೆಳೆಸಿದ್ದಾರೆ. ಹತ್ತಾರು ಇಲಾಖೆಗಳ ಸಚಿವ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ಕೊಟ್ಟವರು ಯಡಿಯೂರಪ್ಪ. ಆಗ ಎರಡು ಖಾತೆ ಕೊಟ್ಟಿದ್ದರು. ಒಂದು ಸಾಕು ಎಂದರೂ, ನೀನೇ ಮಾಡಬೇಕು ಎಂದಿದ್ದರು. ಯಡಿಯೂರಪ್ಪ ಸಿಎಂ ಆದಾಗೆಲ್ಲಾ ಅವರ ನಂತರ ಗೋವಿಂದ ಕಾರಜೋಳ ಎಂಬ ಮಾತುಗಳು ಕೇಳಿಬರುತ್ತಿದ್ದವು. ಅವರು ನನ್ನನ್ನು ಎಂದೂ ಬಿಟ್ಟುಕೊಟ್ಟಿಲ್ಲ ಎಂದರು.

ಸ್ವಾತಂತ್ರ್ಯ ಬಂದು ೭೫ ವರ್ಷಗಳ ಕಾಲ ೬೦ ವರ್ಷ ಕಾಂಗ್ರೆಸ್ ಆಡಳಿತ ಮಾಡಿದೆ. ದುರಾಡಳಿತಕ್ಕೆ ಬೇಸತ್ತು ಜನ ಮೋದಿ ಅವರಿಗೆ ಎರಡು ಅವಧಿಗೆ ಪ್ರಧಾನಿ ಮಾಡಿದ್ದಾರೆ. ಈಗ ಮೂರನೇ ಬಾರಿಗೆ ಪ್ರಧಾನಿ ಮಾಡಲು ದೇಶದ ಜನ ಹಂಬಲಿಸುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಎರಡು ದೈತ್ಯ ಶಕ್ತಿಗಳು ಒಂದಾಗಿವೆ. ದೇವೇಗೌಡರು, ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ೨೮ ಕ್ಷೇತ್ರಗಳಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳು ಗೆಲುವು ಪಡೆಯಲಿದ್ದಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ನಾನು ಚಿತ್ರದುರ್ಗಕ್ಕೆ ಅನಿರೀಕ್ಷಿತ ಅಭ್ಯರ್ಥಿ. ಯಡಿಯೂರಪ್ಪ ಅವರು ನೀನು ಅಭ್ಯರ್ಥಿ ಆಗಬೇಕು ಎಂದರು. ನಾನು ಬೇಡ ಎಂದಿದ್ದೆ. ಆದರೆ, ಅವರು ಒತ್ತಾಯ ಮಾಡಿ ನಿಲ್ಲಿಸಿದರು. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಬೇಕು. ಕೇಂದ್ರ ಸರ್ಕಾರ ಮೀಸಲಿಟ್ಟಿರುವ ೫೩೦೦ ಕೋಟಿ ಅನುದಾನ ತರಬೇಕು. ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಸರಿಯಾಗಬೇಕು. ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಮುರುಗೇಶ್ ನಿರಾಣಿ, ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಎಸ್.ತಿಪ್ಪೇಸ್ವಾಮಿ, ಲೋಕಸಭಾ ಚುನಾವಣಾ ಸಂಚಾಲಕ ಎಸ್.ಲಿಂಗಮೂರ್ತಿ, ಮುಖಂಡರಾದ ಕೆ.ಟಿ.ಕುಮಾರಸ್ವಾಮಿ, ಗನ್ನಾಯಕನಹಳ್ಳಿ ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಜಿ.ಟಿ.ಸುರೇಶ್, ಡಾ.ಮಂಜುನಾಥ್, ರೇಣುಕಾಪ್ರಸಾದ್, ಅಂಕಳಪ್ಪ, ಎಸ್.ಆರ್.ಗಿರೀಶ್, ಶರಣಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!