ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವನ್ನು ‘ಮುಕ್ತಿ ಮೇಳ’ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಗುರುವಾರ ಕರೆದಿದ್ದಾರೆ.
ಈ ಮೂಲಕ ಕುಂಭ ಮೇಳ ಮೃತ್ಯುಕುಂಭ ಎಂದಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತಿರುಗೇಟು ನೀಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾಲ್ತುಳಿತದಲ್ಲಿ 18 ಜನರ ಸಾವನ್ನು ಉಲ್ಲೇಖಿಸಿ ಮಹಾ ಕುಂಭ ಮೇಳವನ್ನು ಮೃತ್ಯುಕುಂಭ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.
ಈ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಪಾಲರು, ಕುಂಭ ಮೇಳ ಆಚರಣೆಯಲ್ಲಿ ವಿನಮ್ರನಾಗಿ ಪಾಲ್ಗೊಳ್ಳಲು ಅಲ್ಲಿಗೆ ಹೋಗಿದ್ದೆ. ಕುಂಭ ಮೇಳ ಮುಕ್ತಿ ಮೇಳ, ಮೃತ್ಯುಂಜಯ ಮೇಳ ಎಂದು ಬಣ್ಣಿಸಿದರು.
ನಿಮಗೆ ಗೊತ್ತಾ, ಕುಂಭಮೇಳವನ್ನು ಭಾರತ ಹೊಂದಿರುವ ಶ್ರೇಷ್ಠ ಸಂಪ್ರದಾಯದ ಪ್ರತೀಕವಾಗಿ ನೋಡುತ್ತೇನೆ. ಕುಂಭವು ದೇವರೊಂದಿಗಿನ ಸಹಭಾಗಿತ್ವವಾಗಿದೆ. ಜನಸಾಮಾನ್ಯರು ಸ್ವಯಂ ಪ್ರೇರಣೆಯಿಂದ ಅಲ್ಲಿಗೆ ಬರುತ್ತಿದ್ದಾರೆ.ಲಕ್ಷ ಲಕ್ಷ ಜನ ತಾವಾಗಿಯೇ ಅಲ್ಲಿಗೆ ಬಂದಿದ್ದರು. ಇದು ಆಕಾಶದೊಂದಿಗೆ ಭೂಮಿ, ದೇವರೊಂದಿಗೆ ಮಾನವ ಮತ್ತು ಆಂತರಿಕ ಪ್ರಪಂಚವನ್ನು ಬಾಹ್ಯ ಪ್ರಪಂಚದೊಂದಿಗೆ ಸಂಪರ್ಕಿಸುವ ಕಾಮನಬಿಲ್ಲಿನ ಸೇತುವೆ. ಭಾರತದ ಸಂಪ್ರದಾಯ ಮತ್ತು ಸಂಸ್ಕೃತಿಯ ಶ್ರೇಷ್ಠತೆ ಎಂದು ಭಾವಿಸುತ್ತೇನೆ ಎಂದರು.
ಯಾವುದೇ ವಿವಾದ ಹುಟ್ಟಿಕೊಳ್ಳಲು ನಾನು ಬಯಸುವುದಿಲ್ಲ. ಇದು ಪ್ರಜಾಸತ್ತಾತ್ಮಕ ವ್ಯವಸ್ಥೆ. ಯಾವುದೇ ಪರಿಸ್ಥಿತಿ ಬಗ್ಗೆ ತನ್ನದೇ ಆದ ಅಭಿಪ್ರಾಯ ವ್ಯಕ್ತಪಡಿಸಲು ಮುಖ್ಯಮಂತ್ರಿ ಅರ್ಹರಿದ್ದಾರೆ. ಇಂತಹ ಪ್ರಜಾಪ್ರಭುತ್ವದ ಸೌಂದರ್ಯನನ್ನು ನಾನು ಸ್ವಾಗತಿಸುತ್ತೇನೆ. ಆದರೆ, ರಾಜ್ಯಪಾಲನಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ರಾಜಕೀಯ ಹೇಳಿಕೆಗಳಿಗೆ ಸಂಬಂಧಿಸಿದಂತೆ ನಾನು ಯಾವುದೇ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ ಎಂದು ಅವರು ಹೇಳಿದರು.