October 12, 2026
Monday, October 12, 2026
spot_img

ಬಿಹಾರದಲ್ಲಿ ಹಳಿ ತಪ್ಪಿದ ಮಹಾನಂದ ಎಕ್ಸ್‌ಪ್ರೆಸ್‌: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ

ಹೊಸದಿಗಂತ ಡಿಜಿಜಿಟಲ್‌ ಡೆಸ್ಕ್:‌

ಬಿಹಾರದ ಆರಾ ರೈಲ್ವೇ ನಿಲ್ದಾಣದ ಬಳಿ ಭಾನುವಾರ ಮುಂಜಾನೆ ಭಾರಿ ರೈಲು ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಆಲಿಪುರದ್ವಾರ ಜಂಕ್ಷನ್‌ನಿಂದ ದೆಹಲಿಗೆ ಹೊರಟಿದ್ದ ಮಹಾನಂದ ಎಕ್ಸ್‌ಪ್ರೆಸ್ ರೈಲು ಮುಂಜಾನೆ ಸುಮಾರು 4 ಗಂಟೆಗೆ ಹಳಿ ತಪ್ಪಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ರೈಲ್ವೇ ಇಲಾಖೆ ಖಚಿತಪಡಿಸಿದೆ.

ತಪ್ಪಾದ ಸಿಗ್ನಲ್‌ನಿಂದ ಹಳಿ ತಪ್ಪಿದ ಕೋಚ್‌ಗಳು?

ಆರಾ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2ಕ್ಕೆ ಬಂದಿದ್ದ ಮಹಾನಂದ ಎಕ್ಸ್‌ಪ್ರೆಸ್‌, ಅಲ್ಲಿಂದ ದೆಹಲಿ ಮಾರ್ಗವಾಗಿ ಹೊರಡಬೇಕಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ರೈಲಿನ ಸಿಗ್ನಲ್ ದೆಹಲಿ ಲೈನ್‌ ಬದಲಿಗೆ ಸಾಸಾರಾಮ್ ಲೈನ್‌ ಕಡೆಗೆ ತೋರಿಸಿದೆ. ಇದರಿಂದಾಗಿ ರೈಲು ಮುಂದೆ ಚಲಿಸಿ, ನಿಲ್ದಾಣದಿಂದ ಕೇವಲ 200 ಮೀಟರ್ ದೂರದಲ್ಲಿ ಹಳಿ ತಪ್ಪಿದೆ. ರೈಲಿನ ಇಂಜಿನ್, ಎಸ್‌ಎಲ್‌ಆರ್ ಮತ್ತು H-1 ಕೋಚ್‌ಗಳ ಚಕ್ರಗಳು ಹಳಿಯಿಂದ ಕೆಳಗೆ ಇಳಿದಿವೆ. ಘಟನೆ ಸಂಭವಿಸುತ್ತಿದ್ದಂತೆ ಪ್ರಯಾಣಿಕರಲ್ಲಿ ಭೀತಿ ಆವರಿಸಿತ್ತು.

ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ

ಅಪಘಾತದ ಬೆನ್ನಲ್ಲೇ ದಾನಾಪುರ ರೈಲ್ವೇ ವಿಭಾಗದ ಡಿಆರ್‌ಎಂ (DRM) ವಿನೋದ್ ಕುಮಾರ್ ಹಾಗೂ ಹಿರಿಯ ಎಂಜಿನಿಯರ್‌ಗಳ ತಂಡ ಸ್ಥಳಕ್ಕೆ ಧಾವಿಸಿದೆ. ಸುಮಾರು 3 ವರೆ ಗಂಟೆಗಳ ನಿರಂತರ ಕಾರ್ಯಾಚರಣೆಯ ನಂತರ ಹಳಿ ತಪ್ಪಿದ ಕೋಚ್‌ಗಳನ್ನು ಬೇರ್ಪಡಿಸಿ, ಉಳಿದ ಬೋಗಿಗಳೊಂದಿಗೆ ಮಹಾನಂದ ಎಕ್ಸ್‌ಪ್ರೆಸ್ ಅನ್ನು ದೆಹಲಿಗೆ ರವಾನಿಸಲಾಯಿತು.

ಇದನ್ನೂ ಓದಿ:

ದಿಲ್ಲಿ-ಹೌರಾ ಮಾರ್ಗದ ರೈಲು ಸಂಚಾರ ಅಸ್ತವ್ಯಸ್ತ

ಈ ಅಪಘಾತದಿಂದಾಗಿ ದೇಶದ ಪ್ರಮುಖ ದಿಲ್ಲಿ-ಹೌರಾ ರೈಲು ಮಾರ್ಗದ ಸಂಚಾರ ಸಂಪೂರ್ಣವಾಗಿ ಏರುಪೇರಾಗಿದೆ. ವಂದೇ ಭಾರತ್, ವಿಭೂತಿ ಎಕ್ಸ್‌ಪ್ರೆಸ್, ಗರೀಬ್ ರಥ್,ಇಂಟರ್‌ಸಿಟಿ ಸೇರಿದಂತೆ ಹಲವು ಪ್ರಮುಖ ರೈಲುಗಳು ತಡವಾಗಿ ಚಲಿಸುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಸದ್ಯ ರೈಲ್ವೇ ತಾಂತ್ರಿಕ ತಂಡವು ಹಳಿ ಮತ್ತು ಸಿಗ್ನಲಿಂಗ್ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸದಲ್ಲಿ ತೊಡಗಿದ್ದು, ಘಟನೆಯ ಬಗ್ಗೆ ಉನ್ನತ ಮಟ್ಟದ ತಾಂತ್ರಿಕ ತನಿಖೆ ಆರಂಭವಾಗಿದೆ.

Must Read