ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಚುನಾವಣೆಗೆ ಎನ್‌ಸಿಪಿ (ಅಜಿತ್ ಪವಾರ್ ಬಣ) ಅಧ್ಯಕ್ಷ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪಕ್ಷದ ಪ್ರಣಾಳಿಕೆಯನ್ನು ಬುಧವಾರ ಬಿಡುಗಡೆ ಮಾಡಿದರು.
ಅಜಿತ್ ಅವರು ಬಾರಾಮತಿಯಲ್ಲಿ, ಪಕ್ಷದ ಕಾರ್ಯಕಾರಿ ಅಧ್ಯಕ್ಷ ಪ್ರಫುಲ್ ಪಟೇಲ್ ಅವರು ಗೋಂದಿಯಾದಲ್ಲಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸುನಿಲ್ ತಟಕರೆ ಅವರು ಮುಂಬೈನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು.
ರಾಜಕೀಯ ಪಕ್ಷವೊಂದು ತಾನು ಸ್ಪರ್ಧಿಸುವ ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿರುವುದು ಇದೇ ಮೊದಲು.
ಬಾರಾಮತಿಯಲ್ಲಿ ಮಾತನಾಡಿದ ಅಜಿತ್ ಪವಾರ್ ಅವರು, ‘ಸರ್ಕಾರ ರಚಿಸಿದ 100 ದಿನಗಳ ಒಳಗಾಗಿ ನವ ಮಹಾರಾಷ್ಟ್ರದ ಪರಿಕಲ್ಪನೆಯನ್ನು ಅನುಷ್ಠಾನ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
ಪ್ರಣಾಳಿಕೆಯ ಪ್ರಮುಖ ಅಂಶಗಳು:
‘ಲಡ್ಕಿ ಬಹೀಣ್’ ಯೋಜನೆ ಅಡಿಯಲ್ಲಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹2,100 ಜಮಾ ಮಾಡಲಾಗುವುದು. ಪ್ರಸ್ತುತ ₹1,500 ನೀಡಲಾಗುತ್ತಿದೆ
ಶೇತ್ಕಾರಿ ಸಮ್ಮಾನ್ ನಿಧಿಯಡಿ ರೈತರಿಗೆ ವಾರ್ಷಿಕ ನೀಡುವ ಹಣವನ್ನು ₹12,000ದಿಂದ ₹15,000ಕ್ಕೆ ಏರಿಕೆ ಮಾಡುತ್ತೇವೆ
ರೈತರ ಸಾಲ ಮನ್ನಾ ಮತ್ತು ಕನಿಷ್ಠ ಬೆಂಬಲ ಬೆಲೆ ಅಡಿ ಮಾರಾಟವಾದ ಎಲ್ಲ ಬೆಳೆಗಳಿಗೆ ಶೇ20ರಷ್ಟು ಹೆಚ್ಚುವರಿ ಸಬ್ಸಿಡಿ
25 ಲಕ್ಷ ಉದ್ಯೋಗ ಸೃಷ್ಟಿ
10 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ಸಮಯದಲ್ಲಿ ಪ್ರತಿ ತಿಂಗಳು ₹10,000 ಭತ್ಯೆ
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ವೇತನ ₹15,000ಕ್ಕೆ ಹೆಚ್ಚಳ