ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಮೈತ್ರಿಕೂಟವು 11 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಮೇಲ್ಮನೆಯ 11 ಸ್ಥಾನಗಳಿಗೆ ಶುಕ್ರವಾರಮತದಾನ ನಡೆದಿದ್ದು, ಸಂಜೆ ಫಲಿತಾಂಶ ಪ್ರಕಟವಾಯಿತು. ಬಿಜೆಪಿ ನೇತೃತ್ವದ ಮೈತ್ರಿಕೂಟ ಸ್ಪರ್ಧಿಸಿದ್ದ ಎಲ್ಲ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಕಳೆದ ಲೋಕಸಭೆ ಚುನಾವಣೆಯ ಕಳಪೆ ಪ್ರದರ್ಶನವನ್ನು ಮೆಟ್ಟಿನಿಂತಿದೆ.
274 ಸದಸ್ಯರ ಬಲದ ವಿಧಾನಸಭೆಯಿಂದ ಅಭ್ಯರ್ಥಿಗಳು ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. 103 ಶಾಸಕರನ್ನು ಹೊಂದಿರುವ ಬಿಜೆಪಿಯ ಎಲ್ಲ ಐವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇವರಲ್ಲಿ ಪಂಕಜಾ ಮುಂಡೆ ಪ್ರಮುಖರಾಗಿದ್ದಾರೆ. ಇನ್ನು ಏಕನಾಥ್ ಶಿಂಧೆ ಬಣದ ಶಿವಸೇನೆಯ ಇಬ್ಬರು ಹಾಗೂ ಅಜಿತ್ ಪವಾರ್ ಬಣದ ಎನ್‌ಸಿಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಒಂದು ಸ್ಥಾನವನ್ನು ಮಾತ್ರ ಪಡೆದುಕೊಂಡಿದೆ. ಇದರೊಂದಿಗೆ ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಬಲವು ಹೆಚ್ಚಾದಂತಾಗಿದೆ.
ವಿಧಾನ ಪರಿಷತ್ ಚುನಾವಣೆಗೂ ಮೊದಲು ಹಾರ್ಸ್ ಟ್ರೇಡಿಂಗ್, ರೆಸಾರ್ಟ್ ರಾಜಕಾರಣದ ಭೀತಿ ಉಂಟಾಗಿತ್ತು. ಅಲ್ಲದೆ, ಪ್ರತಿಪಕ್ಷಗಳಿಗೆ ಅಡ್ಡಮತದಾನದ ಭೀತಿಯೂ ಕಾಡುತ್ತಿತ್ತು. ಇಷ್ಟಾದರೂ, ಕಾಂಗ್ರೆಸ್‌ನ 6 ಶಾಸಕರು ಅಡ್ಡ ಮತದಾನ ಮಾಡಿದ್ದು, ಅಜಿತ್ ಪವಾರ್ ಬಣದ ಎನ್‌ಸಿಪಿಗೆ ಮತದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಸಕ್ತ ವರ್ಷದ ಅಂತ್ಯಕ್ಕೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ.