ಹೊಸದಿಗಂತ ವರದಿ,ಗದಗ:
ತಪ್ಪು ಯಾರು ಎಸಗಿದ್ದಾರೆ. ಅವರ ವಿರುದ್ಧ ಕಾನೂನಿನ ಕಠಿಣ ಕ್ರಮ ಜರುಗಿಸಲಾಗುತ್ತದೆ. ಆದರೆ, ತನಿಖೆ ನಡೆದಾಗ ಸಾರ್ವಜನಿಕ ವಲಯದಲ್ಲಿ ಮುಂದಾಳುಗಳು ಚರ್ಚೆ ಮಾಡುವದು ಸೂಕ್ತವಾದ ಪ್ರಕ್ರಿಯೆ ಅಲ್ಲ. ಚರ್ಚೆಗಳು ತನಿಖೆ ಮೇಲೆ ಪ್ರಭಾವ ಬೀರುತ್ತವೆ ಎಂದು ಕಾನೂನು ಸಚಿವ ಡಾ. ಎಚ್.ಕೆ.ಪಾಟೀಲ ಅವರು ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೆ ಎಸ್‌ಐಟಿಯವರು ತನಿಖೆ ಮಾಡುತ್ತಿದ್ದಾರೆ. ಇಡಿ ಕ್ರಮ ಕೈಗೊಂಡಿದೆ. ವಿಚಾರಣೆ ನಿಷ್ಪಕ್ಷಪಾತವಾಗಿ ಆಗಲಿ. ನಂತರ ತಪ್ಪಿತಸ್ಥರ ಮೇಲೆ ಸರ್ಕಾರ ಕ್ರಮ ಜರಗಿಸುತ್ತದೆ. ಈ ಪ್ರಕರಣದಲ್ಲಿ ನಾಗೇಂದ್ರ ಅವರ ಪಾತ್ರದ ಬಗ್ಗೆ ತನಿಖೆಯಿಂದ ಹೊರ ಬರಬೇಕಾಗಿದೆ. ಸುದ್ದಿಯನ್ನು ಓದದೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಸಾರ್ವಜನಿಕ ಚರ್ಚೆ, ಪತ್ರಿಕಾ ಚರ್ಚೆ ಆಗದಿದ್ದರೆ ಸರಿಯಾಗಿ ತನಿಖೆ ನಡೆಯುತ್ತವೆ ಎಂದು ಹೇಳಿದರು.
ಮುಡಾ ಹಗರಣದ ವಿರುದ್ಧ ಬಿಜೆಪಿ ಪ್ರತಿಭಟನೆ ವಿಷಯ ಕುರಿತು ಪ್ರತಿಕ್ರಿಯೆಸಿದ ಸಚಿವರು, ಯಾವ ಕಾರಣಕ್ಕಾಗಿ ಪ್ರತಿಭಟನೆ? ಸಿಎಂ ಮನೆಯರಿಗೆ ಸೈಟ್ ಮಂಜೂರು ಮಾಡಿಕೊಂಡಿಲ್ಲ.ಕೊಟ್ಟ ಜಾಗೆಗೆ ಕೊಟ್ಟಂತಹ ಪರಿಹಾರವೇ ಹೊರತು ಸೈಟ್ ಮಂಜೂರು ಮಾಡಿದ್ದಲ್ಲ. ಈ ವ್ಯತ್ಯಾಸವನ್ನು ಅರ್ಥೈಸಿಕೊಳ್ಳಬೇಕು. ತನಿಖೆ ನಡೆಯುತ್ತಿದೆ ತನಿಖೆಯ ಆಧಾರದಲ್ಲಿ ಏನು ಕ್ರಮ ಕೈಗೊಳ್ಳಬೇಕು. ಮುಡಾ ತಪ್ಪು ಹೆಜ್ಜೆಗಳ ಬಗ್ಗೆ ಏನು ಕ್ರಮ ತೆಗೆದುಕೊಳ್ಳಬೇಕು ಎನ್ನುವದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಇದರಲ್ಲಿ ಸಿಎಂ ರಾಜೀನಾಮೆ ಕಾರಣ ಇಲ್ಲ. ವಾಲ್ಮೀಕಿ ನಿಗಮದ ಹಗರಣದಲ್ಲಿ ಯೂನಿಯನ್ ಬ್ಯಾಂಕ್‌ನಿಂದ ಹಣ ವರ್ಗಾವಣೆಯಾಗಿದೆ. ಹಾಗಾದರೆ ಕೇಂದ್ರದ ಆರ್ಥಿಕ ಸಚಿವರು ರಾಜೀನಾಮೆ ಕೊಡಬೇಕು ಎಂದು ಕೇಳಲಿಕ್ಕೆ ಆಗುತ್ತಾ ಎಂದು ಸಚಿವ ಡಾ. ಎಚ್. ಕೆ. ಪಾಟೀಲ ಅವರು ಹೇಳಿದರು.
ಇದೇ ಸಂದರ್ಭ ಕಲಾವಿದೆ, ಖ್ಯಾತ ನಿರೂಪಕಿ ಅಪರ್ಣಾಗೆ ಸಚಿವ ಡಾ. ಎಚ್.ಕೆ. ಪಾಟೀಲ ಸಂತಾಪ ಸೂಚಿಸಿ , ಅಪರ್ಣಾ ಅವರ ಅಗಲುವಿಕೆ ಸಿನಿಮಾ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ಹಾನಿಯಾಗಿದೆ. ಅವರ ಅಗಲುವಿಕೆ ಸಹಜವಾಗಿ ಎಲ್ಲರಿಗೂ ದುಃಖ ತಂದಿದೆ. ಕುಟುಂಬದ ಸದಸ್ಯರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.