ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆಯಲ್ಲಿ ಅಕ್ರಮ ಗರ್ಭಪಾತದ ವೇಳೆ ಮಹಾರಾಷ್ಟ್ರದ ಮಹಿಳೆ ಮೃತಪಟ್ಟಿದ್ದು, ಮೂವರನ್ನು ಬಂಧಿಸಲಾಗಿದೆ.
ಹೆಣ್ಣು ಭ್ರೂಣ ಹತ್ಯೆಯ ಆಘಾತಕಾರಿ ಘಟನೆ ನಮ್ಮ ರಾಜ್ಯದಲ್ಲಿಯೇ ನಡೆದಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಘಟನೆಯನ್ನು ಮರೆಮಾಚುವ ಉದ್ದೇಶದಿಂದ ಮಹಿಳೆಯ ಕುಟುಂಬವು ಆಕೆಯ ಶವವನ್ನು ಕಾರಿನಲ್ಲಿ ಮಹಾರಾಷ್ಟ್ರದ ಅವರ ಸ್ವಂತ ಪಟ್ಟಣವಾದ ಸಾಂಗ್ಲಿಗೆ ಸಾಗಿಸುತ್ತಿದ್ದಾಗ, ಮಹಾರಾಷ್ಟ್ರ ಪೊಲೀಸರು ಗಡಿಯಲ್ಲಿ ವಾಹನವನ್ನು ತಡೆದಿದ್ದಾರೆ. ಈ ವೇಳೆ ಮಹಿಳೆಯ ಮೃತದೇಹ ಸಿಕ್ಕಿದೆ.
ಸೋನಾಲಿ (33) ಎಂಬ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮತ್ತೊಂದು ಹೆಣ್ಣು ಮಗುವನ್ನು ಹೊಂದಲು ಆಕೆಯ ಕುಟುಂಬವು ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ, ತಮಗೆ ಹುಟ್ಟಲಿರುವ ಮಗುವಿನ ಲಿಂಗವನ್ನು ಪತ್ತೆಹಚ್ಚಲು ಸೋನಾಲಿ ಪ್ರಸವಪೂರ್ವ ಪರೀಕ್ಷೆಗೆ ಒಳಗಾಗಿದ್ದರು. ನಂತರ ಸಾಂಗ್ಲಿಯಿಂದ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಹೆಣ್ಣು ಭ್ರೂಣವನ್ನು ಗರ್ಭಪಾತ ಮಾಡಲು ನಿರ್ಧರಿಸಿದರು.
ಮಹಾಲಿಂಗಪುರದ ಮನೆಯೊಂದರಲ್ಲಿ ನಡೆಸುತ್ತಿದ್ದ ಕ್ಲಿನಿಕ್‌ನಲ್ಲಿ ಗರ್ಭಪಾತದ ಸಮಯದಲ್ಲಿ ಅತಿಯಾದ ರಕ್ತಸ್ರಾವದಿಂದಾಗಿ, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಸೋನಾಲಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.