ಮಹಾತ್ಮಾ ಗಾಂಧೀಜಿ ಆದರ್ಶಗಳು ಭಾರತದ ಆಧಾರಸ್ತಂಭಗಳು: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಮಹಾತ್ಮಾ ಗಾಂಧೀಜಿಯವರ ಆದರ್ಶಗಳು ಸ್ವತಂತ್ರ ಹಾಗೂ ಗಣತಂತ್ರ ಭಾರತದ ಆಧಾರ ಸ್ತಂಭಗಳಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹುತಾತ್ಮರ ದಿನಾಚರಣೆಯ ಅಂಗವಾಗಿ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ಮಾಧ್ಯಮದವರೊಂದಿಗೆ ಮಾತನಾಡಿದರು.

ಮಹಾತ್ಮಾ ಗಾಂಧೀಜಿಯವರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸುತ್ತೇವೆ. ಮಹಾತ್ಮಾ ಗಾಂಧಿ ವಿಶ್ವದ ನಾಯಕರು. ಸತ್ಯ ಮತ್ತು ಅಹಿಂಸೆಯ ಪ್ರತಿಪಾದಕರು. ಸತ್ಯ, ಅಹಿಂಸೆ ಮತ್ತು ಶಾಂತಿಯಿಂದಲೇ ಸ್ವತಂತ್ರ ಪಡೆಯುವ ಚಲವನ್ನು ತೊಟ್ಟವರು. ಜೈಲು ವಾಸ , ಲಾಠಿ ಏಟು ಮುಂತಾದ ಹಲವಾರು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿಯೂ ತಮ್ಮ ಸತ್ಯ , ಅಹಿಂಸೆಯ ಸಿದ್ಧಾಂತವನ್ನು ಎಂದೂ ಬಿಟ್ಟುಕೊಡಲಿಲ್ಲ ಎಂದರು.

ನನ್ನ ಜೀವನವೇ ಒಂದು ಸಂದೇಶ ಎಂದ ಅವರು, ತಮ್ಮ ಆತ್ಮ ಚರಿತ್ರೆ ಸತ್ಯಾನ್ವೇಷಣೆಯ ಮಾತನ್ನು ಹೇಳಲು ನೈತಿಕವಾಗಿ ಬಹಳ ದೊಡ್ಡ ಶಕ್ತಿ ಇರಬೇಕು. ಅಂಥಹ ವ್ಯಕ್ತಿಗಳು ಮಾತ್ರ ಇದನ್ನು ಹೇಳಲು ಸಾಧ್ಯ. ಅವರ ಜೀವನ ಅತ್ಯಂತ ಪರಿಶುದ್ಧ ಹಾಗೂ ಸತ್ಯದಿಂದ ಕೂಡಿರುವಂಥದ್ದು. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹೀಗಾಗಿಯೇ ಅತ್ಯಂತ ಆದರ್ಶಪ್ರಾಯವಾಗಿದ್ದಾರೆ. ಅವರ ಬದುಕು ಮತ್ತು ವಿಚಾರಗಳು ನಮಗೆ ಸದಾ ದಾರಿದೀಪವಾಗಿದೆ. ಇಂದು ಅವರ ಜೊತೆಗೆ ಸಾವಿರಾರು ಜನ ಹುತಾತ್ಮರಾಗಿದ್ದಾರೆ. ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಲಾಲಾ ಲಜಪತ್ ರಾಯ್ ಪ್ರಮುಖರು. ಇವರೆಲ್ಲರೂ ಸ್ವತಂತ್ರ ಪೂರ್ವದಲ್ಲಿ ಬಲಿದಾನ ಮಾಡಿದವರು. ಅದರ ಜೊತೆಗೆ ಪ್ರತಿ ರಾಜ್ಯದಲ್ಲಿ ಆಯಾ ಪ್ರಾಂತ್ಯಗಳ ಪ್ರಮುಖರು, ಸಾಮಾನ್ಯ ಜನರು ಪ್ರಾಣ ಬಲಿದಾನ, ಆಸ್ತಿ ಅಂತಸ್ತು ನೀಡಿ ತ್ಯಾಗ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿಯವರಿಗೆ ಹಾಗೂ ವಿಶೇಷವಾಗಿ ಅನಾಮಧೇಯ ಸ್ವತಂತ್ರ ಯೋಧರಿಗೆ ನಮನ ಸಲ್ಲಿಸಿದರು.

ದೇಶದ ಅಭಿವೃದ್ಧಿಗೆ ಸಂಕಲ್ಪ:
ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಬಂದಿಲ್ಲ ಎನ್ನುವುದನ್ನು ಅರ್ಥಮಾಡಿಕೊಂಡು, ಸ್ವಾತಂತ್ರ್ಯ ನಂತರದ ದಿನಗಳಲನ್ನು ಅವಲೋಕಿಸಿದರೆ, 75 ವರ್ಷಗಳಲ್ಲಿ ಹಲವಾರು ರಂಗದಲ್ಲಿ ಸಾಧನೆ ಮಾಡಿದ್ದೇವೆ. ಆದರೆ ಸಾಮಾನ್ಯ ಜನ ತಮ್ಮ ಬದುಕನ್ನು, ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಕೆಲಸ ಮಾಡಬೇಕಿದೆ. 75 ವರ್ಷಗಳಲ್ಲಿ ನಾವು ಇನ್ನಷ್ಟು ಕೆಲಸಗಳನ್ನು ಮಾಡಬಹುದಾಗಿತ್ತು ಎನ್ನುವುದು ನಾವು ಆತ್ಮಾವಲೋಕನ ಮಾಡಿಕೊಂಡಾಗ ತಿಳಿಯುತ್ತದೆ. ಅದಕ್ಕಾಗಿ ಪ್ರಧಾನ ಮಂತ್ರಿಗಳು ಆತ್ಮನಿರ್ಭರ್ ಭಾರತ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಧ್ಯೇಯವನ್ನಿಟ್ಟುಕೊಂಡು ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಇಂಧನ, ಶಿಕ್ಷಣ ಆರೋಗ್ಯ ಮುಂತಾದ ಹಲವಾರು ರಂಗಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ರಾಜ್ಯವನ್ನು ಸಂಪದ್ಭರಿತ ವಾಗಿಸಲು ಹಾಗೂ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡಲು ಸಂಕಲ್ಪ ಮಾಡುವ ದಿನ ಇದು ಎಂದರು.

ಜನೀಶ್ ಚಿಕಿತ್ಸೆಗೆ ಸಹಾಯ:
ಜನೀಶ್ ಎಂಬ ಮಗುವಿಗೆ ಚಿಕಿತ್ಸೆ ಗಾಗಿ ₹ 16 ಕೋಟಿ ಆವಶ್ಯಕತೆ ಇದೆ. ಈ ರೀತಿಯ ಬಹಳಷ್ಟು ಮಕ್ಕಳಿದ್ದು, ಸರಕಾರ ಈ ಬಗ್ಗೆ ಏನು ಕ್ರಮ ಕೈಗೊಂಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಮಂತ್ರಿಗಳು ಈ ಬಗ್ಗೆ ಸಂಪೂರ್ಣ ವಿವರಗಳನ್ನು ಪಡೆದು, ಈ ಮೊತ್ತ ಏಕೆ ಬೇಕೆನ್ನುವ ಬಗ್ಗೆ ತಿಳಿದು, ಅಗತ್ಯ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು. ಸಾರ್ವಜನಿಕರೂ ಸಹಾಯ ಮಾಡಬೇಕೆಂದು ಮಾಧ್ಯಮಗಳು ಕರೆ ನೀಡಿವೆ. ಸರಕಾರವಾಗಿ ಕೂಲಂಕುಷವಾಗಿ ಪರಿಶೀಲನೆ ಮಾಡಿ ಅದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

ಚಿತ್ರಮಂದಿರಗಳಲ್ಲಿ ಆಸನ ವ್ಯವಸ್ಥೆ:
ಕೋವಿಡ್ ನಿಯಮಗಳನ್ನು ಸಡಿಲಿಕೆ ಮಾಡಿರುವ ಬಗ್ಗೆ ಸಿನಿಮಾದವರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಉತ್ತರಿಸಿ, ಸಿನಿಮಾದವರಿಗೆ ಗೃಹ ಸಚಿವನಾಗಿ, ಮುಖ್ಯಮಂತ್ರಿಯಾಗಿ ಬಹಳಷ್ಟು ಸವಲತ್ತುಗಳನ್ನು ನೀಡಲಾಗಿದೆ. ಅವರಿಂದ ಮನವಿ ಪಡೆದು ಆಸನ ವ್ಯವಸ್ಥೆಗಳ ಬಗ್ಗೆ ತಾಂತ್ರಿಕ ತಜ್ಞರ ಸಲಹೆ ಮೇರೆಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!