ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತರೂಢ ಮಹಾಯುತಿ ಮೈತ್ರಿಕೂಟ ಕ್ಲೀನ್ ಸ್ವೀಪ್ ನೊಂದಿಗೆ ಮತ್ತೆ ಅಧಿಕಾರಕ್ಕೇರುತ್ತಿದೆ. ಇತ್ತ ಹೀನಾಯ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ‘ಮಹಾಯುತಿ ಸುನಾಮಿ’ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಇಲ್ಲಿ ನಡೆದಿದ್ದು ಒಂದೇ ಚುನಾವಣೆ, ಒಂದೇ ಪಕ್ಷದಂತೆ ಕಾಣುತ್ತಿದೆ. ಈ ಸುನಾಮಿಯಂತಹ ಫಲಿತಾಂಶಕ್ಕೆ ಮಹಾಯುತಿ ಏನು ಮಾಡಿದೆ? ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದಾದ್ಯಂತ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರು ಸುರಕ್ಷಿತವಾಗಿಲ್ಲ. ಆದರೂ ಮಹಾರಾಷ್ಟ್ರದ ಈ ಫಲಿತಾಂಶ ಸಂಪೂರ್ಣ ಅನಿರೀಕ್ಷಿತ ಮತ್ತು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ. ಆದಾಗ್ಯೂ ನಾವು ಮಹಾರಾಷ್ಟ್ರದ ಹಕ್ಕುಗಳಿಗಾಗಿ ಹೋರಾಡುತ್ತೇವೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಬಿಜೆಪಿ – ಶಿವಸೇನೆ ಶಿಂಧೆ ಬಣ – ಎನ್‌ಸಿಪಿ ಅಜಿತ್ ಪವಾರ್ ಬಣದ ಆಡಳಿತಾರೂಢ ಮೈತ್ರಿಕೂಟ ‘ಮಹಾಯುತಿ’ ಬಹುಮತಕ್ಕಿಂತ ಭಾರಿ ಮುನ್ನಡೆ ಕಾಯ್ದುಕೊಂಡಿದ್ದು, 230ಕ್ಕೊ ಹೆಚ್ಚು ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ.