ಹೊಸದಿಗಂತ ವರದಿ, ಮೈಸೂರು:
ನಗರದಲ್ಲಿ ಮಹಿಷಾ ದಸರಾ ಆಚರಣೆ ಮತ್ತು ಅದನ್ನು ವಿರೋಧಿಸಿ ಚಾಮುಂಡಿ ಬೆಟ್ಟ ಚಲೋ ನಡೆಸುವ ಕಾರ್ಯಕ್ರಮಗಳಿಗೆ ಇಲ್ಲಿಯ ತನಕ ಅನುಮತಿ ನೀಡಿಲ್ಲ ಎಂದು ಪೊಲೀಸ್ ಆಯುಕ್ತ ಡಾ. ರಮೇಶ್ ಬಾನೋತ್ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಅಶೋಕಪುರಂನಲ್ಲಿ ಮಹಿಷ ದಸರಾ ಆಚರಿಸಿ, ಪುರಭವನದವರೆಗೆ ಮೆರವಣಿಗೆ ನಡೆಸಲು ಅನುಮತಿ ನೀಡುವಂತೆ ಮಹಿಷ ದಸರಾ ಆಚರಣ ಸಮಿತಿಯವರು ನಮಗೆ ಅರ್ಜಿ ನೀಡಿದ್ದಾರೆ. ಮಹಿಷ ದಸರಾ ವಿರೋಧಿಸಿ 5000 ಮಂದಿಯಿAದ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ನಡೆಸಲು ಬಿಜೆಪಿಯವರು ಅನುಮತಿ ಕೇಳಿದ್ದಾರೆ. ಆದರೆ ಅ.15ರಂದು ನಾಡ ಹಬ್ಬ ಮೈಸೂರು ದಸರಾ ಉದ್ಘಾಟನೆ ಇರುವ ಕಾರಣ ನಾವು ಎರಡು ಕಡೆಯವರಿಗೂ ಕಾರ್ಯಕ್ರಮ ನಡೆಸುವುದಕ್ಕೆ ಅನುಮತಿ ನೀಡಿಲ್ಲ. ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ,ಮೈಸೂರಿನ ಇಮೇಜ್ ಹಾಳಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಈ ಕುರಿತು ಅ.12 ರಂದು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಎರಡೂ ಕಡೆಯವರು ಕೊಟ್ಟಿರುವ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಕ್ರಮಕೈಗೊಳ್ಳುವ ಮುನ್ನ ಬೇಕಾದ ಸಿದ್ಧತೆ ನಡೆಸಬೇಕು. ಹಾಗಾಗಿ,ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನವಾಗಲಿದೆ ಎಂದರು. ಪೊಲೀಸ್ ಇಲಾಖೆ ಈ ವಿಚಾರದಲ್ಲಿ ಯಾವುದೇ ವಿಳಂಬ ಮಾಡಿಲ್ಲ. ಕಾನೂನು ಕ್ರಮ ಜರುಗಿಸುವ ಮುನ್ನ ನಾವು ಮಾತನಾಡಬೇಕು,ಚರ್ಚಿಸಬೇಕಾಗಿದೆ. ಅದಕ್ಕಾಗಿಯೇ ನಾವು ಅವರೊಂದಿಗೆ ಸಭೆ ಮಾಡುತ್ತೇವೆ. ನಂತರ ಜಿಲ್ಲಾಡಳಿತ ಮತ್ತುಪೊಲೀಸ್ ಇಲಾಖೆ ಚರ್ಚಿಸಿ ಮುಂದಿನ ತೀರ್ಮಾನ ಮಾಡಲಿದ್ದೇವೆ. ಯಾರಿಂದಲಾದರೂ ಕಾನೂನು ಸುವ್ಯವಸ್ಥೆಗೆ ಭಂಗವಾದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.