ಹೊಸದಿಗಂತ ವರದಿ, ಗೋಕರ್ಣ:
ಇಲ್ಲಿಯ ಮುಖ್ಯ ಕಡಲ ತೀರದ ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ ೭ ಜನ ಸೇರಿದಂತೆ ಒಟ್ಟು ೮ ಜನ ಪ್ರವಾಸಿಗರನ್ನು ಜೀವ ರಕ್ಷಕ ಪಡೆ ಸಿಬ್ಬಂದಿ ರಕ್ಷಣೆ ಮಾಡಿದರು.
ಪ್ರವಾಸಕ್ಕೆಂದು ಬಂದ ಹುಬ್ಬಳ್ಳಿಯ ಕುಟುಂಬದ ಏಳು ಸದಸ್ಯರು ನೀರಿಗೆ ಇಳಿದಿದ್ದರು. ಈ ವೇಳೆ ಸಮುದ್ರದಲ್ಲಿ ಆಟವಾಡುತ್ತಿರುವಾಗ ನೀರಿನಲ್ಲಿ ಮುಳುಗುವ ಸ್ಥಿತಿಯಲ್ಲಿದ್ದರು. ಕೂಡಲೇ ಜೀವ ರಕ್ಷಕ ಪಡೆ ಯುವಕರು ಸಮುದ್ರಕ್ಕಿಳಿದು ಏಳು ಮಂದಿಯನ್ನೂ ರಕ್ಷಿಸಿದ್ದಾರೆ.
ಹುಬ್ಬಳ್ಳಿಯಿಂದ ಬಂದಿದ್ದ ಪ್ರವಾಸಿಗರಾದ ಪರಶುರಾಮ (೪೪), ಅಕ್ಷರ(೧೪), ರುಕ್ಮಿಣಿ (೩೮), ರಜ (೧೪), ಖುಷಿ (೧೩), ದೀಪಿಕಾ (೧೨), ನಂದಕಿಶೋರ (೧೦) ಅವರನ್ನು ರಕ್ಷಣೆ ಮಾಡಲಾಗಿದೆ. ಇದೇ ವೇಳೆ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಮತ್ತೊಬ್ಬರನ್ನೂ ರಕ್ಷಣೆ ಮಾಡಲಾಗಿದೆ. ಪಿಂಡ ಪ್ರಧಾನ ಮಾಡಲು ಬಂದಿದ್ದ ಹುಬ್ಬಳ್ಳಿಯ ಎಲ್.ವಿ. ಪಾಟೀಲ (೩೦) ಎಂಬವರು ಸಮುದ್ರಕ್ಕೆ ಇಳಿದಿದ್ದರು. ಅವರು ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಶಿವಪ್ರಸಾದ ಅಂಬಿಗ, ಲೋಕೇಶ ಹರಿಕಂತ್ರ ಎಂಬುವವರು ಕೂಡಲೇ ಸಮುದ್ರಕ್ಕೆ ಜಿಗಿದು ರಕ್ಷಣೆ ಮಾಡಿದ್ದಾರೆ.