ಹೊಸದಿಗಂತ ಔರಾದ್
ರೈತರು ಕೃಷಿ ಚಟುವಟಿಕೆಗಳನ್ನು ನಡೆಸಲು ಜಮೀನಿನ ದಾರಿಗಳ ಸಮಸ್ಯೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ, ಅತಿಕ್ರಮಣಗೊಂಡಿರುವ ಹಳೆಯ ದಾರಿಗಳನ್ನು ಕೂಡಲೇ ತೆರವುಗೊಳಿಸಿ ಪುನರುಜ್ಜೀವನಗೊಳಿಸುವಂತೆ ಮಾಜಿ ಸಚಿವರು ಹಾಗೂ ಔರಾದ್ (ಬಿ) ಶಾಸಕರಾದ ಪ್ರಭು ಬಿ. ಚವ್ಹಾಣ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜನವರಿ 19ರಂದು ಕಮಲನಗರ ತಾಲ್ಲೂಕಿನ ಬೆಂಬ್ರಾ, ಕೋರೆಕಲ್, ಠಾಣಾ ಕುಶನೂರ, ನಿಡೋದಾ ಸೇರಿದಂತೆ ಹತ್ತು ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು, ಗ್ರಾಮಸ್ಥರೊಂದಿಗೆ ನೇರ ಸಂವಾದ ನಡೆಸಿದರು. ಈ ವೇಳೆ ರೈತರು ತಮ್ಮ ಹೊಲಗಳಿಗೆ ತೆರಳಲು ಎದುರಿಸುತ್ತಿರುವ ದಾರಿಯ ಸಮಸ್ಯೆಗಳ ಕುರಿತು ಗಂಭೀರ ಅಹವಾಲುಗಳನ್ನು ಸಲ್ಲಿಸಿದರು.

ಹೊಲಗಳಿಗೆ ಹೋಗುವ ಹಳೆಯ ದಾರಿಗಳಲ್ಲಿರುವ ಅಡೆತಡೆಗಳನ್ನು ತಕ್ಷಣ ತೆರವುಗೊಳಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO) ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕೆಲಸ ಮಾಡಿ, ದಾರಿಯ ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು.
ಭೂದಾಖಲೆಗಳ ಇಲಾಖೆಯಿಂದ ಸರ್ವೇ ಮಾಡಿಸಿ, ಗ್ರಾಮ ಪಂಚಾಯಿತಿ ಮೂಲಕ ಸುಸಜ್ಜಿತ ರಸ್ತೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ರಸ್ತೆ ನಿರ್ಮಾಣಕ್ಕೆ ಕೆಲವರು ವೈಯಕ್ತಿಕ ಕಾರಣಗಳಿಂದ ಅಡ್ಡಿಪಡಿಸುತ್ತಿರುವುದನ್ನು ಗಮನಿಸಿದ ಶಾಸಕರು, “ಎಲ್ಲಾ ರೈತರಿಗೂ ದಾರಿಯ ಅವಶ್ಯಕತೆ ಇರುತ್ತದೆ. ಗ್ರಾಮಸ್ಥರು ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು, ಒಮ್ಮತದ ನಿರ್ಧಾರಕ್ಕೆ ಬಂದರೆ ಸರ್ಕಾರದಿಂದ ರಸ್ತೆ ನಿರ್ಮಿಸಲು ಸುಲಭವಾಗುತ್ತದೆ” ಎಂದು ಮನವಿ ಮಾಡಿದರು.
ಕೇವಲ ಕೃಷಿ ದಾರಿ ಮಾತ್ರವಲ್ಲದೆ, ಕುಡಿಯುವ ನೀರು, ವಿದ್ಯುತ್, ವಸತಿ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಕುರಿತು ಸಾರ್ವಜನಿಕರು ಶಾಸಕರ ಗಮನ ಸೆಳೆದರು. ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸಿದ ಅವರು, ಸ್ಥಳದಲ್ಲಿದ್ದ ತಹಸೀಲ್ದಾರ್ ಅಮಿತ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಇತ್ಯರ್ಥಪಡಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಪ್ರಮುಖ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.


