ಬಸ್ ಪ್ರಯಾಣ ಹಿತಮಿತವಾಗಿರಲಿ: ಸಚಿವ ಶಿವಾನಂದ ಪಾಟೀಲ್

ಹೊಸದಿಂಗತ ವರದಿ,ಹಾವೇರಿ:

ಬಸ್ ಪ್ರಯಾಣ ಉಚಿತವೆಂದುಕೊಂಡು ವಿನಾಕಾರಣ ಪ್ರಯಾಣ ಮಾಡುವುದರಿಂದ ಮನೆ ನಿಭಾಯಿಸುವುದು ಕಷ್ಟವಾಗುತ್ತದೆ. ಇದರಿಂದ ಸಮಾಜಕ್ಕೂ ಆರ್ಥಿಕ ಹೊರೆಯಾಗುತ್ತದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಭಾನುವಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರ ಉಚಿತ ಬಸ್ ಪ್ರಯಾಣ ಒದಗಿಸಿದೆ ಎಂದು ಮಹಿಳೆಯರು ಪ್ರಯಾಣ ಮಾಡುವುದರಿಂದ ಮನೆಯಲ್ಲಿದ್ದವರಿಗೆ ಹಾಗೂ ಸ್ವತಃ ಮಹಿಳೆಗೂ ಮನೆ ನಿಭಾಯಿಸುವುದು ಕಷ್ಟವಾಗುತ್ತದೆ ಎನ್ನುವ ಮೂಲಕ ಪ್ರಯಾಣ ಹಿತಮಿತವಾಗಿಲಿ ಎಂದು ಸೂಕ್ಷ್ಮವಾಗಿ ಮಹಿಳೆಯರಿಗೆ ಕಿವಿ ಮಾತು ಹೇಳಿದರಲ್ಲದೆ ಮನೆಯ ಜವಾಬ್ದಾರಿಯನ್ನು ಪ್ರಸ್ತುತ ಮಹಿಳೆಯರೇ ನಿಭಾಯಿಸುತ್ತಾರೆ ಅವರಿಗಾಗುವ ಆರ್ಥಿಕ ಹೊರೆಯನ್ನು ತಪ್ಪಿಸುವಂತಹ ಕಾರ್ಯ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದೆ ಎಂದರು.
ಯಾವುದೇ ಯೋಜನೆಯನ್ನು ಜಾರಿಗೆ ತಂದ ಸಂದರ್ಭದಲ್ಲಿ ಪರ,ವಿರೋಧ ವ್ಯಕ್ತವಾಗುವುದು ಸಹಜ. ವಿರೋಧ ಪಕ್ಷದವರ ಟೀಕೆಗಳನ್ನು ನಾನು ಸ್ವಾಗತಿಸುತ್ತೇವೆ. ಟೀಕೆಗಳಿದ್ದಾಗಲೇ ಹೆಚ್ಚಿನ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಪ್ರೇರಣೆಯಾಗುತ್ತವೆ. ಸರ್ಕಾರ ಅಸ್ತತ್ವಕ್ಕೆ ಬಂದ ಸಂದರ್ಭದಲ್ಲಿ ೫ ಗ್ಯಾರಂಟಿ ಯೋಜನೆಗಳ ಕುರಿತು ವಿರೋಧ ಪಕ್ಷದವರ ಟೀಕೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಒಂದೊಂದೆ ಯೋಜನೆಗಳನ್ನು ಮುಖ್ಯಮಂತ್ರಿಗಲು ಜಾರಿಗೊಳಿಸುತ್ತಿದಾರೆ ಎಂದು ತಿಳಿಸಿದರು.
ಶಕ್ತಿ ಯೋಜನೆ ಜಾರಿಯಿಂದ ರಸ್ತೆ ಸಾರಿಗೆ ಸಂಸ್ಥೆಗಳಿಗೂ ಶಕ್ತಿಯನ್ನು ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಉಳೀದ ೪ ಯೋಜನೆಗಳಲ್ಲಿ ಹಂತ ಹಂತವಾಗಿ ಆಗಷ್ಟ್ ಒಳಗಾಗಿ ಜಾರಿಗೊಳಿಸಲಾಗುವುದು. ಇದು ಬಡವರಿಗಾಗಿ ರೂಪಿಸಿದ ಯೋಜನೆ. ಯಾರಾದರೂ ಉಳ್ಳವರು ಹಣ ಪಾವತಿ ಮಾಡಿ ಪ್ರಯಾಣಿಸುತ್ತೇವೆ ಎಂದರೆ ಅದನ್ನು ಸ್ವಾಗತಿಸಲಾಗುವುದು ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಶಕ್ತಿ ಯೋಜನೆಯನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು. ಡ್ರೈವರ್, ಕಂಡಕ್ಟರ್‌ಗಳು ಮಹಿಳೆಯರಿಗೆ ಸಹಕಾರ ನೀಡಿ ಅವರನ್ನು ತಲುಪಿಸುವ ಸ್ಥಳಗಳಿಗೆ ಸುರಕ್ಷಿತವಾಗಿ ತಲುಪಿಸುವ ಕೆಲಸವನ್ನು ಮಾಡಿದಾಗ ಮಾತ್ರ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಸಫಲವಾಗುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಕೆಲವರು ೫ ಗ್ಯಾರಂಟಿಗಳ ಕುರಿತು ಗೇಲಿ ಮಾಡಿದ್ದರು ಆದರೆ ಸಿಎಂ ಸಿದ್ದರಾಮಯ್ಯ ಅವರು ಒಂದೊಂದಾಗಿ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಮುಂದಾಗುತ್ತಿದ್ದಾರೆ. ಒಬ್ಬ ತಾಯಿ ಒಂದು ಮಗುವಿಗೆ ಜನ್ಮ ನೀಡುವುದಕ್ಕೆ ೯ ತಿಂಗಳು ಬೇಕಾಗುತ್ತದೆ. ಅದೇ ರೀತಿ ಒಂದು ಸರ್ಕಾರ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಸಮಯಾವಕಾಶ ಬೇಕಾಗುತ್ತದೆ ಎಂದು ತಿಳಿಸಿದರು.
ಉಚಿತ ಬಸ್ ಪ್ರಯಾಣವನ್ನು ಸರ್ಕಾರ ನೀಡಿದ್ದರಿಂದ ಮಹಿಳೆಯರು ಹೆಚ್ಚಿನ ದಿವಸಗಳ ಕಾಲ ಪ್ರಯಾಣ ಬೆಳೆಸಿದರೆ ಪುರುಷರೇ ಮನೆಯಲ್ಲಿ ಅಡುಗೆ ಮಾಡಬೇಕಾಗುತ್ತದೆ ಎಂದು ಹಾಲಗಿ ಗ್ರಾಮದಲ್ಲಿ ಪುರುಷರೊಬ್ಬರು ನನ್ನನ್ನು ಪ್ರಶ್ನಿಸಿದರು. ಆಗ ಇಷ್ಟು ದಿನ ಅವರು ನಮಗೆ ಅಡುಗೆ ಮಾಡಿ ಬಡಿಸಿದ್ದಾರೆ ಇನ್ನು ಮುಂದೆ ನಾವು ಅಡುಗೆ ಮಾಡಿ ನೀಡಿದರೆ ತಪ್ಪಲ್ಲ ಎಂದು ಹೇಳಿದನ್ನು ಅವರು ಸಭೆಯಲ್ಲಿ ಹಾಸ್ಯಮಯವಾಗಿ ಹೇಳಿದಾಗ ನೆರೆದ ಜನತೆಯಿಂದ ನಗುವಿನ ಮೂಲಕ ಪ್ರತಿಕ್ರೀಯೆ ದೊರೆಯಿತು..
ವಿಪ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ಪೂನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಕಾಂಗ್ರೆಸ್ ಇಡೇರಿಸುತ್ತಿದೆ. ೫ ಯೋಜನೆಗಳನ್ನು ಹಂತ ಹಂತವಾಗಿ ಇಡೇರಿಸಲಾಗುವುದು. ಸ್ವಲ್ಪ ಅವಕಾಶಕೊಡಿ, ರಾಜ್ಯ, ಜಿಲ್ಲೆ ಹಾಗೂ ಜಿಲ್ಲೆಗಳ ಅಭಿವೃದ್ಧಿಗಳನ್ನು ಮಾಡುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ಮಾಜಿ ಶಾಸಕರಾದ ಮಂಜುನಾಥ ಕುನ್ನೂರ, ಸೋಮಣ್ಣ ಬೇವಿನಮರದ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ್ ಸೇರಿದಮತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!