ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಹೆಚ್ಚಿಸಿಲ್ಲ: ಸಚಿವ ಶಿವಾನಂದ ಪಾಟೀಲ್

ಹೊಸದಿಂಗತ ವರದಿ,ಹಾವೇರಿ:

ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಹೆಚ್ಚಿಸಿಲ್ಲ. ಪ್ರತಿ ವರ್ಷ ದರ ಪರಿಷ್ಕರಣೆಯನ್ನು ಕೆಸಿಆರ್‌ಎಸ್‌ನವರು ಮಾಡುತ್ತಾರೆ ಈಗಲೂ ಅವರೆ ದರ ಪರಿಷ್ಕರಣೆ ಮಾಡಿ ದರ ನಿಗದಿ ಮಾಡಿದ್ದಾರೆ ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದರ ಪರಿಷ್ಕರಣೆಯಲ್ಲಿ ಕೆಸಿಆರ್‌ಎಸ್ ಏಪ್ರೀಲ್‌ದಲ್ಲಿನೇ ಮಾಡಬೇಕಾಗಿತ್ತು ಆದರೆ ಆಗ ಅವರು ಮಾಡದೇ ಈಗ ಮಾಡಿ ಜಾರಿಗೆ ತಂದ ಎಡವಟ್ಟಿನಿಂದ ಈ ಸಮಸ್ಯೆಯಾಗಿದೆ ಎಂದು ತಿಳಿಸಿದರು.
ದರ ಹೆಚ್ಚಳದಿಂದ ಅತ್ಯಧಿಕ ಬಿಲ್ ಬರುತ್ತಿದ್ದು ಜನತೆ ಕಂಗಾಲಾಗುತ್ತಿದ್ದಾರೆ ಎನ್ನವುದು ಸುಳ್ಳು. ೨-೩ ತಿಂಗಳ ಬಾಕಿ ಇರುವ ಗ್ರಾಹಕರ ಬಿಲ್‌ಗಳಲ್ಲಿ ಮಾತ್ರ ಹೆಚ್ಚಿನ ಮೊತ್ತ ಬಂದಿರುವ ಮಾಹಿತಿ ನನಗಿದೆ. ಒಂದು ವೇಳೆ ಬಿಲ್ ಅತ್ಯಧಿಕ ಬಂದಿದ್ದರೆ ಅಂತಹ ಬಿಲ್‌ಗಳನ್ನು ಪರಿಶೀಲನೆ ಮಾಡುವುದಕ್ಕೆ ಕ್ರಮ ಜರುಗಿಸಲಾಗುವುದು ಎಂದರು.
ಉಚಿತ ಬಸ್ ಪ್ರಯಾಣ ಶೇ.೯೦ ರಷ್ಟು ಜನತೆಗೆ ಅವಷ್ಯಕವಾಗಿದೆ ಶೇ.೧೦ ಜನರು ಇದನ್ನು ವಿರೋಧಿಸಬಹುದು ಇಲ್ಲವೆ ನಿರಾಕರಿಸಬಹುದು. ರಾಜ್ಯದಲ್ಲಿ ಶೇ.೮೦ ರಷ್ಟು ಜನರು ಪ್ರತಿ ತಿಂಗಳು ೫೦ ಯುನಿಟ್ ಬಳಕೆ ಮಾಡುತ್ತಿದ್ದುದು ಕಂಡುಬಂದಿದೆ. ಶೇ.೧೩ ರಷ್ಟು ಜನರು ಮಾತ್ರ ಅಧಿಕ ವಿದ್ಯುತ್ ಬಳಕೆ ಮಾಡುತ್ತಿದ್ದರು. ಅತ್ಯಧಿಕ ಜನತೆಗೆ ಅವಷ್ಯಕತೆ ಮತ್ತು ಪ್ರಯೋಜನವಾಗುತ್ತದೆ ಎನ್ನುವುದನ್ನು ಮನದಲ್ಲಿಟ್ಟುಕೊಂಡು ಯೋಜನೆ ಜಾರಿಗೊಳಿಸಲಾಗುತ್ತಿದೆ. ಎಂದು ಹೇಳಿದರು.
ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರ ಕಾರ್ಯ ವೈಖರಿ ನನಗೆ ಗೊತ್ತಿಲ್ಲ. ಆದರೆ ನಾನು ಮಾತ್ರ ಜಿಲ್ಲೆಯ ಅಭಿವೃದ್ಧಿಗೆ ಬೇಕಾದ ಎಲ್ಲ ಕೆಲಸವನ್ನು ಮಾಡುತ್ತೇನೆ. ಮುಂದಿನ ಆರು ತಿಂಗಳುಗಳ ನಂತರ ನನ್ನ ಕಾರ್ಯ ವೈಖರಿಯ ಬಗ್ಗೆ ಗೊತ್ತಾಗುತ್ತದೆ ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರೀಯೆ ನೀಡಿದರು.
ಕಾಂಗ್ರೆಸ್ ಸರ್ಕಾರದ ಹಿಂದಿನ ಅವಧಿಯಲ್ಲಿ ಶೇ.೪೫ ರಷ್ಟು ಕಮೀಷನ್ ನಡೆದಿತ್ತು ಎಂದು ಯಾವುದೇ ದಾಖಲಾತಿಗಳಿಲ್ಲದೆ ಆಪಾದನೆಯನ್ನು ಮಾಡಿದ್ದಾರೆ. ಅದಕ್ಕೆ ಹೆಚ್ಚಿನ ಮಹತ್ವವನ್ನು ನೀಡುವ ಅವಷ್ಯಕತೆ ಇಲ್ಲ. ರೈತ ವಿರೋಧಿ ಮೂರು ಕಾಯ್ದೆಗಳನ್ನು ಸರ್ಕಾರ ಖಂಡಿತವಾಗಿಯೂ ಹಿಂದೆ ಪಡೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.
ಮಳೆ ಅಭಾವದಿಂದಾಗಿ ಹಾವೇರಿ ನಗರದಲ್ಲಿನ ಕೊಳವೆ ಬಾವಿಗಳಲ್ಲಿ ನೀರಿಲ್ಲದಿರುವ ಮಾಹಿತಿ ನೀಡಿದ್ದಾರೆ. ಹೆಗ್ಗೇರಿ ಕೆರೆಗೆ ಪೊಲೀಸ್ ವಸತಿಗೃಹಗಳಲ್ಲಿ ಬಳಕೆ ಮಾಡಿರುವ ನೀರು ಸೇರುತ್ತಿದೆಯೆಂತೆ ಈ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಕೆಯಾದ ನೀರು ಬಂದು ಸೇರದಂತೆ ಕ್ರಮ ಕೈಗೊಳ್ಳಲು ತಿಳಿಸಲಾಗುವುದು ಎಂದರು.
ನಗರದಲ್ಲಿ ಯುಜಿಡಿ, ಕೆಯುಡಬ್ಲೂಎಸ್ ಅರ್ಧಕ್ಕೆ ನಿಂತಿರುವ ಯೋಜನೆಗಳ ಕುರಿತು ಚರ್ಚಿಸಲಾಗುವುದು. ಅಧಿವೇಶನಕ್ಕೂ ಪೂರ್ವದಲ್ಲಿ ಕೆಡಿಪಿ ಸಭೆ ನಡೆಸಿ ಜಿಲ್ಲೆಯ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು. ಅಗತ್ಯ ಬಿತ್ತನೆ ಬೀಜ ಮತ್ತು ರಸ ಗೊಬ್ಬರ ಸಂಗ್ರಹವಿದೆ ಅಗತ್ಯ ಬಿದ್ದರೆ ಪೂರೈಕೆಗೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಬಸವರಾಜ ಶಿವಣ್ಣವನರ, ರುದ್ರಪ್ಪ ಲಮಾಣಿ, ವಿಪ ಸದಸ್ಯ ಸಲೀಂ ಅಹ್ಮದ್, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!