Saturday, March 25, 2023

Latest Posts

ಕಾಂಗ್ರೆಸ್, ಜೆಡಿಎಸ್ ಮುಕ್ತ ಕರ್ನಾಟಕ ಮಾಡಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ

ಹೊಸದಿಗಂತ ವರದಿ, ಮೈಸೂರು:

ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಕುಟುಂಬ ರಾಜಕೀಯ, ಕುಟುಂಬದ ಅಭಿವೃದ್ಧಿಗಾಗಿ ಇರುವ ಕಾರಣ, ಈ ಎರಡು ಪಕ್ಷಗಳ ಮುಕ್ತ ಕರ್ನಾಟಕವನ್ನು ಮತದಾರರು ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ರಾಜ್ಯ ಚುನಾವಣಾ ಸಹ ಉಸ್ತುವಾರಿಯಾದ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕರೆ ನೀಡಿದರು.

ಭಾನುವಾರ ರಾತ್ರಿ ನಗರದ ಮಹಾರಾಜ ಕಾಲೇಜ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶವನ್ನು 70 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಕೇವಲ ತನ್ನ ಪರಿವಾರದ ಅಭಿವೃದ್ಧಿಯನ್ನು ಮಾಡಿಕೊಂಡು ಬಂದಿದೆ. ಕುಟುಂಬ ಮೊದಲು, ರಾಷ್ಟ್ರ ನಂತರ ಎಂದು ಹೇಳಿಕೊಂಡು ಬಂದಿದೆ. ಅಭಿವೃದ್ಧಿ ಎಂಬುದು ಕಾಂಗ್ರೆಸ್‌ನವರ ಮತ ಬ್ಯಾಂಕ್‌ನವರಿಗೆ ಮಾತ್ರ ಆಗುತ್ತಿತ್ತು. ಕಾಂಗ್ರೆಸ್ ಸರ್ಕಾರದ ಆಡಳಿತದ ಅವಧಿಯಲ್ಲಿ ಜನರು ಕುಡಿಯುವ ನೀರಿಗಾಗಿ ಕಾಪೋರೇಷನ್ ಟ್ಯಾಂಕ್ ಬರುವುದನ್ನೇ ಕಾಯಬೇಕಾಗಿತ್ತು. ಬಂದಾಗ ಮರ‍್ನಾಲ್ಕು ಬಿಂದಿಗೆ ನೀರಿಗಾಗಿ ಕಚ್ಚಾಡಬೇಕಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೀಗ ದೇಶದ ಇಡೀ ಚಿತ್ರವೇ ಬದಲಾಗಿದೆ. ದೇಶದ ಪ್ರತಿಯೊಂದು ಕುಟುಂಬಕ್ಕೂ ಕುಡಿಯುವ ನೀರು ಪೂರೈಸುವ ಕೆಲಸ ನಡೆಯುತ್ತಿವೆ. ಅಭಿವೃದ್ಧಿ ಕೆಲಸಗಳು ದೇಶದ ಪ್ರತಿಯೊಂದು ಮನೆಯನ್ನೂ ಮುಟ್ಟುತ್ತಿವೆ. ಇಷ್ಟೇ ಅಲ್ಲಾ ಭಾರತ ಶಕ್ತಿ ಈಗ ಅದ್ಬುತವಾಗಿ ಬೆಳೆದಿದೆ. ನಮ್ಮೊಂದಿಗೆ ಸದಾ ಕಾಲ ಜಗಳ ಕಾಯುವುದಕ್ಕೆ, ಯುದ್ಧಕ್ಕೆ ಬರುತ್ತಿದ್ದ ಪಾಕಿಸ್ತಾನ, ಚೀನಾ ದೇಶಗಳು ಕೂಡ ತೆಪ್ಪಗಾಗಿವೆ. ದೇಶದ ಗಡಿಯಲ್ಲೂ ರಸ್ತೆಗಳ ಅಭಿವೃದ್ಧಿ ಕೆಲಸಗಳು ನಡೆದಿವೆ, ಆ ಮೂಲಕ ದೇಶದ ರಕ್ಷಣೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ದೇಶದ ಜನರು ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತ ಮಾಡಿವೆ. ಹಾಗಾಗಿ ಕರ್ನಾಟಕ ರಾಜ್ಯವನ್ನು ಎಟಿಎಂ ಮಾಡಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಹವಣಿಸಿ, ಅಧಿಕಾರಕ್ಕೆ ಬರಲು ತೀವ್ರ ಪ್ರಯತ್ನ ನಡೆಸುತ್ತಿದೆ. ಬಿಜೆಪಿ ವಿರುದ್ಧ ಸುಳ್ಳು ಪ್ರಚಾರಗಳನ್ನು ನಡೆಸುತ್ತಿವೆ. ತಮಿಳುನಾಡಿನಲ್ಲಿ ಡಿಎಂಕೆಯೊoದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಚುನಾವಣೆಗೂ ಮೊದಲು ಪ್ರತಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 1 ಸಾವಿರ ರೂ ನೀಡುವುದಾಗಿ ಸುಳ್ಳು ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು ಹಲವು ತಿಂಗಳಾದರೂ ಒಬ್ಬ ಮಹಿಳೆಗೂ ಒಂದು ರೂಪಾಯಿಯನ್ನೂ ನೀಡಿಲ್ಲ. ಈಗ ಕರ್ನಾಟಕದಲ್ಲೂ ಕಾಂಗ್ರೆಸ್ ಪ್ರತಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ ನೀಡುವುದಾಗಿ ಸುಳ್ಳು ಭರವಸೆಯನ್ನು ನೀಡುತ್ತಿದೆ. ಕಾಂಗ್ರೆಸ್ ಈ ಭರವಸೆಯನ್ನು ಈಡೇರಿಸಬೇಕಾದರೆ ಪ್ರತಿ ತಿಂಗಳು 4 ಸಾವಿರ ಕೋಟಿ ರೂ ಬೇಕಾಗುತ್ತದೆ. ಇಷ್ಟೊಂದು ಹಣವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಅವರು ತಮ್ಮ ಮನೆಯಿಂದ ನೋಟ್ ಪ್ರಿಂಟ್ ಮಾಡಿ ತಂದು ಕೊಡ್ತಾರಾ ಎಂದು ವಾಗ್ದಾಳಿ ನಡೆಸಿದರು.

ದಕ್ಷಿಣ ಭಾರತದಲ್ಲೂ ಬಿಜೆಪಿ ಗೆಲ್ಲಲಿದೆ. ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿನಲ್ಲೂ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ , ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇoದ್ರ, ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ವಿಜಯ ಸಂಕಲ್ಪ ಯಾತ್ರೆ ಸಹ ಸಂಚಾಲಕ ಕೌಟಿಲ್ಯ ರಘು, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ದತ್ತಾತ್ರೇಯ, ನಗರಪಾಲಿಕೆ ಮೇಯರ್ ಶಿವಕುಮಾರ್, ಉಪಮೇಯರ್ ರೂಪಾ, ಚಿತ್ರ ನಟ ಎಸ್.ಜಯಪ್ರಕಾಶ್ (ಜೆ.ಪಿ), ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಹೇಮಂತ್ ಕುಮಾರ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!