ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆನ ದಿನಗಳಲ್ಲಂತೂ ಹೃದಯ ಕಾಯಿಲೆಗಳು ಅತೀ ಹೆಚ್ಚು. ಇದರೊಂದಿಗೆ ಪಾರ್ಶ್ವವಾಯು ಖಾಯಿಲೆಯೂ ಜನತೆಯನ್ನು ಕಾಡುತ್ತಿದೆ. ಮನೆಯಲ್ಲಿಯೇ ನಾವು ಬಳಸುವ ಆಹಾರ ಕ್ರಮವನ್ನು ಬದಲಾಯಿಸುವುದರ ಮೂಲಕ ಈ ರೋಗವನ್ನು ತಪ್ಪಿಸಲು ಸಾಧ್ಯವಿದೆ.
ದೈನಂದಿನ ಒತ್ತಡಗಳು ನಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತಿರುತ್ತವೆ. ಇದರ ಜೊತೆಗೆ ಆಹಾರ ಕ್ರಮಗಳಲ್ಲಾಗುತ್ತಿರುವ ಬದಲಾವಣೆಗಳು ಕೂಡಾ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತಿರುತ್ತವೆ. ಈ ಕಾರಣಕ್ಕಾಗಿಯೇ ಅನೇಕಾನೇಕ ರೋಗಗಳು ಹೆಚ್ಚಾಗುತ್ತಿವೆ. ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿದ್ದೇ ಆದಲ್ಲಿ ಆರೋಗ್ಯ ಪಡೆಯಲು ಸಾಧ್ಯವಿದೆ.
ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಪರಿಶೀಲಿಸುತ್ತಿರುವುದರಿಂದ ಆರೋಗ್ಯದ ಬಗ್ಗೆ ನಮಗೆ ಅರಿವಾಗುತ್ತಿರುತ್ತವೆ. ಈ ಕೊಲೆಸ್ಟ್ರಾಲ್‍ನಲ್ಲಿ ಎರಡು ವಿಧಗಳಿವೆ. ಒಂದು ಉತ್ತಮ ಕೊಲೆಸ್ಟ್ರಾಲ್, ಇನ್ನೊಂದು ಕೆಟ್ಟ ಕೊಲೆಸ್ಟ್ರಾಲ್. ಕೊಲೆಸ್ಟ್ರಾಲ್ ಅಂಶ ದೇಹದಲ್ಲಿ ಅತಿಯಾಗಿದ್ದರೆ ಔಷಧಿಗಳ ಮೊರೆ ಹೋಗದೆ ಈ ಹಣ್ಣುಗಳನ್ನು ಈ ರೀತಿ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಚಿಕ್ಕು(ಸಪೋಟಾ) ಒಂದು ಆರೋಗ್ಯಕರ ಹಣ್ಣು. ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇರುವವರಿಗೆ ಈ ಚಿಕ್ಕು ಸಹಾಯ ಮಾಡುತ್ತದೆ. ಚಿಕ್ಕು ಹಣ್ಣು ಎಷ್ಟು ಆರೋಗ್ಯಕರವೋ ಅಷ್ಟೇ ಅದರ ಸಿಪ್ಪೆಯೂ ಆರೋಗ್ಯಕರವಾಗಿದೆ. ಇದರ ಸಿಪ್ಪೆಯಲ್ಲಿ ಕಬ್ಬಿಣ ಮತ್ತು ಪೊಟ್ಯಾಶಿಯಂ ಅಂಶ ಹೇರಳವಾಗಿರುವುದರಿಂದ ಆರೋಗ್ಯವರ್ಧನೆಗೆ ಸಹಕಾರಿಯಾಗಿದೆ. ಚಿಕ್ಕು ಹಣ್ಣನ್ನು ಸಿಪ್ಪೆ ಸಹಿತ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ.
ಪಿಯರ್ ಹಣ್ಣು ಮತ್ತೊಂದು ಉತ್ತಮವಾದ ಆರೋಗ್ಯಕ್ಕೆ ಸಹಕಾರಿಯಾಗುವ ಹಣ್ಣು. ದೇಹಕ್ಕೆ ಬೇಕಾಗುವಂತಹ ಅಗತ್ಯ ಪೋಷಕಾಂಶಗಳು ಪಿಯರ್ ಹಣ್ಣಿನ ಸಿಪ್ಪೆಯಲ್ಲಿವೆ. ದಿನಂಪ್ರತಿ ಒಂದು ಹಣ್ಣನ್ನು ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ದೇಹದಿಂದ ದೂರವಾಗಲು ಸಹಕಾರಿಯಾಗುತ್ತದೆ.
ಆಪಲ್ ಸಿಪ್ಪೆ ತೆಗೆದು ತಿನ್ನುವವರು ಹೆಚ್ಚು. ಆದರೆ ಆಪಲ್ ಸಿಪ್ಪೆ ತೆಗೆಯದೆ ತಿಂದರೆ ವಿಟಮಿನ್ ಎ ಮತ್ತು ಸಿ ಹಾಗೂ ಕೆ ಹೇರಳವಾಗಿ ದೇಹಕ್ಕೆ ಲಭಿಸುತ್ತದೆ. ಹೃದಯ ಸಂಬಂಧಿ ಖಾಯಿಲೆಯಿಂದ ದೂರ ಇರುವುದಲ್ಲದೆ, ಕಾಯಿಲೆಗಳಿಂದ ಮುಕ್ತರನ್ನಾಗಿಸಲು ಸಹಾಯ ಮಾಡುತ್ತದೆ.
ದೇಹದ ಕೆಟ್ಟ ಕೊಲೆಸ್ಟ್ರಾಲ್ ದೂರಮಾಡಲು ಸಿಪ್ಪೆ ಸಹಿತವಾಗಿ ಕಿವಿ ಹಣ್ಣು ಸೇವನೆ ಮಾಡುವುದು ಉತ್ತಮ. ಈ ಅಂಶಗಳನ್ನು ಆಹಾರದಲ್ಲಿ ಬಳಸಿದ್ದೇ ಆದಲ್ಲಿ ಆರೋಗ್ಯವಂತ ಜೀವನ ನಿಮ್ಮದಾಗುತ್ತದೆ.