ಪತ್ನಿಯನ್ನು ಬೇರೆ ಸ್ತ್ರೀಯರ ಜತೆ ಹೋಲಿಕೆ ಮಾಡಿ ವ್ಯಂಗ್ಯವಾಡುವುದು ಮಾನಸಿಕ ಕ್ರೌರ್ಯಕ್ಕೆ ಸಮ: ಕೇರಳ ಹೈಕೋರ್ಟ್​

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಪತ್ನಿಯನ್ನುಇನ್ನಾವುದೋ ಸ್ತ್ರೀಯರ ಜತೆ ಹೋಲಿಕೆ ಮಾಡಿ ವ್ಯಂಗ್ಯವಾಡುವುದು, ಇದನ್ನೇ ಹೇಳಿಕೊಂಡು ಆಕೆಯನ್ನು ನಿಂದಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮವಾಗಿದೆ ಎಂದು ಕೇರಳ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.

ಕೇರಳದ ಪತಿಯೊಬ್ಬ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​ ಈ ರೀತಿಯಾಗಿ ತೀರ್ಪು ನೀಡಿದೆ.
ಪತಿ ಈ ರೀತಿ ಮಾಡುತ್ತಿದ್ದರೆ ಅದನ್ನು ಪತ್ನಿಯಾದವಳು ಸಹಿಸಿಕೊಳ್ಳಬೇಕಿಲ್ಲ. ಇದು ಮಾನಸಿಕ ಕ್ರೌರ್ಯವಾಗಿದೆ, ಇಂಥ ಸಂದರ್ಭಗಳಲ್ಲಿ ಮದುವೆಯನ್ನು ಅನೂರ್ಜಿತಗೊಳಿಸಲಾಗುವುದು ಎಂದು ಕೋರ್ಟ್​ ಹೇಳಿದೆ.

ಪತ್ನಿಯಾದವಳು ತನ್ನ ನಿರೀಕ್ಷೆಗೆ ತಕ್ಕಂತೆ ಇಲ್ಲ ಎನ್ನುವ ಕಾರಣಕ್ಕೋ ಅಥವಾ ಇನ್ನಾವುದೋ ಮಹಿಳೆಯರನ್ನು ಹೋಲಿಕೆ ಮಾಡುವ ಮೂಲಕ ಹಿಂಸೆ ನೀಡಿದರೆ ಅದನ್ನು ಪತ್ನಿ ಸಹಿಸಿಕೊಳ್ಳುವುದು ಸರಿಯಲ್ಲ ಎಂದು ಕೋರ್ಟ್​ ಹೇಳಿದೆ.

ಈ ಪ್ರಕರಣದಲ್ಲಿ ದಂಪತಿ 13 ವರ್ಷ ಬೇರೆ ಬೇರೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ ಕೌಟುಂಬಿಕ ಕೋರ್ಟ್​ ಮದುವೆಯನ್ನು ಅನೂರ್ಜಿತಗೊಳಿಸಿತ್ತು. ಈ ಆದೇಶದ ವಿರುದ್ಧ ಪತಿ ಹೈಕೋರ್ಟ್​ ಮೆಟ್ಟಿಲೇರಿದ್ದ. ಆದರೆ ಪತಿಯ ಮೇಲ್ಮನವಿಯನ್ನು ಕೋರ್ಟ್​ ಮಾನ್ಯ ಮಾಡಲಿಲ್ಲ.

‘ಮದುವೆಯಾದಾಗಿನಿಂದಲೂ ನನ್ನ ಪತಿ ನನ್ನನ್ನು ಉಳಿದ ಹೆಂಗಸರಿಗೆ ಹೋಲಿಸುತ್ತಿದ್ದರು. ನಾನು ಉಳಿದ ಹೆಂಗಸರಂತೆ ಚೆನ್ನಾಗಿಲ್ಲ ಎಂದೂ, ಅವರ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ಹೀಯಾಳಿಸುತ್ತಲೇ ಬಂದಿದ್ದಾರೆ. ನಾನು ನೋಡಲು ಚೆನ್ನಾಗಿ ಇಲ್ಲವೆಂದು ಅಪಹಾಸ್ಯ ಮಾಡುತ್ತಲೇ ಬಂದಿದ್ದು, ದೈಹಿಕ ಸಂಪರ್ಕವನ್ನೂ ಸರಿಯಾಗಿ ಮಾಡಲಿಲ್ಲ, ನನ್ನನ್ನು ದೂರವೇ ಇಡುತ್ತಿದ್ದರು. ಈ ಹಿನ್ನೆಲೆಯಲ್ಲಿ ದೌರ್ಜನ್ಯ ಸಹಿಸಿಕೊಳ್ಳಲು ಸಾಧ್ಯವಾಗದೇ ನಾನು ಅವರನ್ನು ಬಿಟ್ಟು ಹೋಗಿದ್ದೆ’ ಎಂದು ಪತ್ನಿ ಕೋರ್ಟ್​ಗೆ ತಿಳಿಸಿದಳು.

ದಂಪತಿ ಸುದೀರ್ಘವಾಗಿ ಬೇರ್ಪಟ್ಟ ಕಾರಣದಿಂದ ಈ ವಿವಾಹವನ್ನು ಅನೂರ್ಜಿತಗೊಳಿಸಲಾಗುವುದು ಎಂದು ಕೌಟುಂಬಿಕ ಕೋರ್ಟ್​ ಹೇಳಿತ್ತು. ಆದರೆ ಪತಿ ನೀಡುತ್ತಿದ್ದ ಮಾನಸಿಕ ಹಿಂಸೆ ಗಮನಿಸಿದ ಹೈಕೋರ್ಟ್​, ‘ವಿವಾಹ ಅನೂರ್ಜಿತಗೊಳಿಸಿರುವ ಕೌಟುಂಬಿಕ ಕೋರ್ಟ್​ ಆದೇಶ ಸರಿಯಾಗಿಯೇ ಇದೆ, ಆದರೆ ಕಾರಣ ಅದಲ್ಲ, ಬದಲಿಗೆ ಪತ್ನಿಗೆ ಮಾನಸಿಕ ಹಿಂಸೆ ನೀಡಿರುವ ಕಾರಣದಿಂದ ವಿವಾಹವನ್ನು ಅನೂರ್ಜಿತಗೊಳಿಸಲಾಗಿದೆ’ ಎಂದು ಹೇಳಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!