ಹೊಸದಿಗಂತ ವರದಿ ಚಿತ್ರದುರ್ಗ:
ದೇಶದ ಹಿರಿಯ ನಾಗರಿಕರನ್ನು ದೇವರಿಗೆ ಸಮಾನವಾಗಿ ಕಾಣುವುದು ನಮ್ಮ ಸಂಸ್ಕೃತಿಯಾಗಿದೆ. ವಯೋಸಹಜ ದೌರ್ಬಲ್ಯಗಳಿಂದ ಬಳಲುತ್ತಿರುವ ಹಿರಿಯರ ಬದುಕು ಸುಗಮ ಹಾಗೂ ಸ್ವಾಭಿಮಾನದಿಂದ ಕೂಡಿರುವಂತೆ ನೋಡಿಕೊಳ್ಳುವುದು ಮತ್ತು ಅವರಿಗೆ ನೆರವಾಗುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ನಗರದ ಎಸ್‌ಎಸ್‌ಕೆಎಸ್ ಸಮುದಾಯ ಭವನದಲ್ಲಿ ಭಾನುವಾರ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಜಿಲ್ಲಾಡಳಿತ, ಅಲಿಮ್ಕೊ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ವಯೋಶ್ರೀ ಯೋಜನೆ’ಯಡಿ ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ನಾಗರಿಕರ ಬಗ್ಗೆ ಅಪಾರವಾದ ವೈಯಕ್ತಿಕ ಕಾಳಜಿ ಮತ್ತು ಗೌರವ ಹೊಂದಿದ್ದಾರೆ. ಅವರ ಆಸಕ್ತಿಯ ಫಲವಾಗಿ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಹಿರಿಯರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ಉಚಿತವಾಗಿ ನೀಡುವ ಮೂಲಕ ಅವರ ನೆರವಿಗೆ ನಿಲ್ಲಬೇಕು ಎಂಬ ಉದಾತ್ತ ಉದ್ದೇಶದಿಂದ ರಾಷ್ಟ್ರೀಯ ವಯೋಶ್ರೀ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲಾಗಿದೆ. ಸ್ವತಃ ಪ್ರಧಾನಿ ಅವರೇ ಹಲವೆಡೆ ಈ ಯೋಜನೆಗೆ ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ದಿನನಿತ್ಯದ ಬಳಕೆಯ ವಿವಿಧ ಸಾಧನ ಸಲಕರಣೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಹಿರಿಯರ ನೆರವಿಗಾಗಿ ‘ಎಲ್ಡರ್ ಲೈನ್’ (ಸಹಾಯವಾಣಿ ಸಂಖ್ಯೆ: ೧೪೫೬೭) ಸ್ಥಾಪಿಸಲಾಗಿದ್ದು, ಈ ಮೂಲಕ ಆರೋಗ್ಯ ಸೇವೆಗಳ ಆಪ್ತ ಸಮಾಲೋಚನೆ, ಕಾನೂನು ಸಲಹೆ ಹಾಗೂ ವೃದ್ಧಾಶ್ರಮಗಳ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ೧.೭೦ ಲಕ್ಷ ಹಿರಿಯ ನಾಗರಿಕರಿದ್ದು, ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಮತ್ತು ಹೊಳಲ್ಕೆರೆ ತಾಲ್ಲೂಕುಗಳ ಸುಮಾರು ೯೮೬ ಫಲಾನುಭವಿಗಳಿಗೆ ಒಟ್ಟು ೮೪.೮೪ ಲಕ್ಷ ವೆಚ್ಚದಲ್ಲಿ ೪,೪೭೧ ಸಾಧನ ಸಲಕರಣೆಗಳನ್ನು ಹಂಚಲಾಗುತ್ತಿದೆ. ಉಳಿದ ಮೊಳಕಾಲ್ಮೂರು ಮತ್ತು ಹೊಸದುರ್ಗ ತಾಲ್ಲೂಕುಗಳಲ್ಲೂ ಶೀಘ್ರದಲ್ಲೇ ಫಲಾನುಭವಿಗಳಿಗೆ ಆಯಾ ತಾಲ್ಲೂಕು ಕೇಂದ್ರಗಳಲ್ಲೇ ಉಪಕರಣಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ:
ಕಳೆದ ವರ್ಷ ಆಡಿಪ್ ಯೋಜನೆಯಡಿ ಜಿಲ್ಲೆಯ ೧,೦೧೭ ವಿಕಲಚೇತನರಿಗೆ ಒಟ್ಟು ೧.೧೩ ಕೋಟಿ ವೆಚ್ಚದಲ್ಲಿ ೨,೨೯೩ ಸಾಧನಗಳನ್ನು ವಿತರಿಸಲಾಗಿದೆ. ಒಟ್ಟಾರೆಯಾಗಿ ೨೦೨೨ ರಿಂದ ೨೦೨೬ರ ಅವಧಿಯಲ್ಲಿ ಕೇಂದ್ರ ಸರ್ಕಾರವು ಜಿಲ್ಲೆಯಲ್ಲಿ ಸುಮಾರು ೩.೬೦ ಕೋಟಿ ವೆಚ್ಚದಲ್ಲಿ ೩,೮೬೮ ಫಲಾನುಭವಿಗಳಿಗೆ ೧೦,೯೫೯ ಸಾಧನ ಸಲಕರಣೆಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಮಾತನಾಡಿ, ಹಲವು ಬಾರಿ ಹಿರಿಯ ನಾಗರಿಕರು ತಮ್ಮ ಕೊನೆಗಾಲದಲ್ಲಿ ಮಕ್ಕಳ ಹೆಸರಿಗೆ ಜಮೀನು ಅಥವಾ ಆಸ್ತಿಯನ್ನು ದಾನವಾಗಿ ಬರೆದುಕೊಟ್ಟ ನಂತರ, ಮಕ್ಕಳು ಅವರನ್ನು ನಿರ್ಲಕ್ಷಿಸುವ ಅಥವಾ ಸರಿಯಾಗಿ ನೋಡಿಕೊಳ್ಳದ ಘಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ಹಿರಿಯ ನಾಗರಿಕರ ರಕ್ಷಣೆಗಾಗಿ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ ೨೦೦೭’ ನೆರವಾಗುತ್ತದೆ. ತಮಗೆ ಅನ್ಯಾಯವಾದಲ್ಲಿ ಹಿರಿಯರು ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಅಲಿಮ್ಕೊ ನೋಡಲ್ ಅಧಿಕಾರಿ ಎಲ್.ಸರ್ಕಾರ್, ಕಂಪನಿಯ ಅಭಿಷೇಕ್, ಮುಖಂಡ ಮುರಳಿ ಸೇರಿದಂತೆ ಮತ್ತಿತರರು ಹಾಜರಿದ್ದರು.



