ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ನಟ ನಿರ್ಮಲ್ ಬೆನ್ನಿ ಇಂದು (ಆಗಸ್ಟ್ 23) ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 37 ವರ್ಷ ವಯಸ್ಸಾಗಿತ್ತು.
2013ರಲ್ಲಿ ತೆರೆಕಂಡ ಲಿಜೋ ಜೋಸ್ ಪೆಲ್ಲಿಶ್ಶೆರಿ ನಿರ್ದೇಶನದ ʼಅಮೆನ್ʼ ಚಿತ್ರದ ಕೊಚ್ಚಚ್ಚನ್ ಪಾತ್ರದ ಮೂಲಕ ಅವರು ಜನಪ್ರಿಯರಾಗಿದ್ದರು. ಇಂದಿಗೂ ಅವರನ್ನು ಮಲಯಾಳಿಗಳು ಆ ಪಾತ್ರದ ಮೂಲಕವೇ ಗುರುತಿಸುತ್ತಿದ್ದರು.
ನಿರ್ಮಲ್ ಬೆನ್ನಿ ಅವರ ನಿಧನ ವಾರ್ತೆಯನ್ನು ಅವರ ಆಪ್ತ ಸ್ನೇಹಿತ ಮತ್ತು ನಿರ್ಮಾಪಕ ಸಂಜಯ್ ಪಡಿಯೂರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʼʼಆತ್ಮೀಯ ಗೆಳೆಯನಿಗೆ ನೋವಿನೊಂದಿಗೆ ವಿದಾಯ. ʼಅಮೆನ್ʼ ಚಿತ್ರದ ಕೊಚ್ಚಚ್ಚನ್ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಿರ್ಮಲ್ ಬೆನ್ನಿ ನಾನು ನಿರ್ಮಿಸಿದ ʼದೂರಂʼ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೃದಯಾಘಾತದ ಕಾರಣ ಅವರು ಇಂದು ನಿಧನ ಹೊಂದಿದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದೇನೆʼʼ ಎಂದು ಅವರು ಬರೆದುಕೊಂಡಿದ್ದಾರೆ.
ಕಾಮಿಡಿಯನ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಬೆನ್ನಿ ನಿರ್ಮಲ್ ಯೂಟ್ಯೂಬ್ ಮತ್ತು ಸ್ಟೇಜ್ ಪ್ರೋಗ್ರಾಂ ಮೂಲಕ ಜನರ ಗಮನ ಸೆಳೆದಿದ್ದರು. ಇದೇ ಮುಂದೆ ಚಿತ್ರರಂಗ ಪ್ರವೇಶಕ್ಕೂ ದಾರಿ ಮಾಡಿಕೊಟ್ಟಿತು.
2012ರಲ್ಲಿ ತೆರೆಕಂಡ ʼನವಾಗತರ್ಕ್ ಸ್ವಾಗತಂʼ ಸಿನಿಮಾದ ಮೂಲಕ ನಿರ್ಮಲ್ ಬೆನ್ನಿ ಮಾಲಿವುಡ್ ಪ್ರವೇಶಿಸಿದರು. ಬಳಿಕ ʼಅಮೆನ್ʼ, ʼದೂರಂʼ ಸೇರಿದಂತೆ 12 ವರ್ಷಗಳಲ್ಲಿ ಸುಮಾರು 5 ಚಿತ್ರಗಳಲ್ಲಿ ನಟಿಸಿದರು. ಅವರ ನಿಧನಕ್ಕೆ ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.