ಮದ್ಯ ಅಕ್ರಮ ಮಾರಾಟ ವಿರೋಧಿಸಿ ಮಲ್ಲಸಮುದ್ರ ಗ್ರಾಮಸ್ಥರ ಪ್ರತಿಭಟನೆ

ಹೊಸ ದಿಗಂತ ವರದಿ,ಚಿತ್ರದುರ್ಗ:

ಚಳ್ಳಕೆರೆ ತಾಲ್ಲೂಕು ದೇವರೆಡ್ಡಿಹಳ್ಳಿ ಪಂಚಾಯಿತಿಗೆ ಸೇರಿದ ಮಲ್ಲಸಮುದ್ರ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವುದನ್ನು ತಡೆಯುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಮಲ್ಲಸಮುದ್ರ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಮಲ್ಲಸಮುದ್ರ ಗ್ರಾಮ ನೆರೆಯ ಆಂಧ್ರ ಗಡಿಭಾಗಕ್ಕೆ ಸೇರಿರುವುದರಿಂದ ಆಂಧ್ರದಿಂದ ಇಲ್ಲಿಗೆ ಬಂದು ಮದ್ಯ ಸೇವಿಸಿ ದಿನವೂ ಗಲಾಟೆ ಮಾಡುವುದು ಸಾಮಾನ್ಯವಾಗಿದೆ. ಮಹಿಳೆಯರು, ಮಕ್ಕಳು ನಿರ್ಭಯವಾಗಿ ಗ್ರಾಮದಲ್ಲಿ ಓಡಾಡುವುದು ಕಷ್ಟವಾಗಿದೆ. ಪೆಟ್ಟಿಗೆ ಅಂಗಡಿಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅನೇಕ ಬಾರಿ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆಯರು ದೂರಿದರು.

ಕುಡುಕರ ಹಾವಳಿಯಿಂದಾಗಿ ಗ್ರಾಮದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತಿದೆ. ಕುಡಿದು ಬಾಯಿಗೆ ಬಂದಂತೆ ಮಾತನಾಡುವುದರಿಂದ ಅದನ್ನು ಕೇಳಲು ಆಗುತ್ತಿಲ್ಲ. ಅಕ್ರಮ ಮದ್ಯ ಮಾರಾಟದ ಪರಿಣಾಮ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕರೂ ಮದ್ಯದ ದಾಸರಾಗುತ್ತಿದ್ದಾರೆ. ಹಾಗಾಗಿ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡ ಕೆ.ಪಿ.ಭೂತಯ್ಯ, ಎಂ.ಯಶೋಧ, ತಿಮ್ಮಕ್ಕ, ಕಲ್ಲಮ್ಮ, ಶಾರದಮ್ಮ, ಹೊನ್ನೂರಮ್ಮ, ನಂದಿನಿ, ನಾಗಮ್ಮ, ಶಿಲ್ಪ, ಭಾಗ್ಯಮ್ಮ, ರತ್ನಮ್ಮ, ಮಾರಕ್ಕ, ಯಲ್ಲಕ್ಕ, ಪೆನ್ನಕ್ಕ ಇನ್ನು ಮುಂತಾದವರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!