ಸೊಪ್ಪು, ಕಡ್ಲೇಗಿಡ, ಚಹಾ ಮಾರಾಟ ಮಾಡುತ್ತಾ ಅತಿಥಿ ಶಿಕ್ಷಕರಿಂದ ಸೇವೆ ಖಾಯಂಗೊಳಿಸುವಂತೆ ಪ್ರತಿಭಟನೆ

ಹೊಸ ದಿಗಂತ ವರದಿ,ದಾವಣಗೆರೆ:

ಸೇವೆ ಖಾಯಂಗೊಳಿಸಲು ಒತ್ತಾಯಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಬೋಧಕರು ನಗರದಲ್ಲಿ ಬುಧವಾರ ಸೊಪ್ಪು, ಕಡ್ಲೇಗಿಡ, ಚಹಾ, ತಟ್ಟೆ ಇಡ್ಲಿ ಮಾರಾಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಅನಿರ್ಧಿಷ್ಟಾವಧಿಗೆ ಕಾಲೇಜು ತರಗತಿ ಬಹಿಷ್ಕರಿಸಿ ನಗರದ ಜಿಲ್ಲಾಡಳಿತ ಭವನದ ಸಮೀಪ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿರುವ ಅತಿಥಿ ಉಪನ್ಯಾಸಕರು, ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದರು.

ಇದೇ ವೇಳೆ ಸಂಘದ ಜಿಲ್ಲಾಧ್ಯಕ್ಷ ಡಾ.ಕೊಸಗಿ ಶ್ಯಾಮಪ್ರಸಾದ್ ಮಾತನಾಡಿ, ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ 11 ಸಾವಿರಕ್ಕೂ ಅಧಿಕ ಅತಿಥಿ ಬೋಧಕರು ಕಳೆದ ೨ ದಶಕದಿಂದಲೂ ಕಡಿಮೆ ಗೌರವಧನಕ್ಕೆ ಕೆಲಸ ಮಾಡುತ್ತಿದ್ದೇವೆ. ಅಂದಿನಿಂದಲೂ ನಮ್ಮ ಸೇವೆ ಖಾಯಂಗೆ ಒತ್ತಾಯಿಸಿ ರಾಜ್ಯವ್ಯಾಪಿ ವಿವಿಧ ಹಂತದ ಹೋರಾಟ ನಡೆಸಿಕೊಂಡು ಬಂದಿದ್ದರೂ ಸರ್ಕಾರ ಸ್ಪಂದಿಸಿಲ್ಲ. ದೆಹಲಿ, ಪಂಜಾಬ್, ಹರಿಯಾಣ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅತಿಥಿ ಬೋಧಕರ ಸೇವೆಯನ್ನು ಖಾಯಂಗೊಳಿಸಿದ್ದು, ಅದೇ ಮಾದಿರಯಲ್ಲಿ ನಮಗೂ ಸೇವೆ ಖಾಯಂ ಮಾಡಬೇಕು ಎಂದು ಒತ್ತಾಯಿಸಿದರು.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅತಿಥಿ ಬೋಧಕರನ್ನು ದೆಹಲಿ ಇತರೆ ರಾಜ್ಯಗಳ ಮಾದರಿಯಲ್ಲಿ ಖಾಯಂ ಮಾಡುವ ಬಗ್ಗೆ ಧ್ವನಿ ಎತ್ತಿದ್ದರು. ಇದಕ್ಕಾಗಿ ಸಿ ಅಂಡ್ ಆರ್ ರೂಲ್ ತಿದ್ದುಪಡಿ ಮಾಡುವಂತೆಯೂ ಒತ್ತಡ ಹೇರಿದ್ದರು. ಈಗ ಸಿದ್ದರಾಮಯ್ಯ ಸ್ವತಃ ಮುಖ್ಯಮಂತ್ರಿಯಾಗಿದ್ದರೂ ಅತಿಥಿ ಬೋಧಕರ ಸೇವೆ ಖಾಯಂಗೆ ಮನಸ್ಸು ಮಾಡುತ್ತಿಲ್ಲ. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಅತಿಥಿ ಬೋಧಕರ ಸೇವೆ ಖಾಯಂ ಮಾಡುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿತ್ತು. ಈಗ ಕಾಂಗ್ರೆಸ್ ಸರ್ಕಾರವಿದ್ದು, ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದರೂ ವಿಪಕ್ಷದಲ್ಲಿದಾಗ ನಮ್ಮ ಮೇಲಿದ್ದ ಕಾಳಜಿ ಅಧಿಕಾರಕ್ಕೆ ಬಂದ ನಂತರ ಇಲ್ಲವಾಗಿದೆ ಎಂದು ಅವರು ದೂರಿದರು.

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿರುವ ಅತಿಥಿ ಬೋಧಕರ ಅವಲಂಬಿತರು ರಾಜ್ಯವ್ಯಾಪಿ ಸುಮಾರು ೧೧ ಲಕ್ಷಕ್ಕೂ ಅಧಿಕ ಜನರಿದ್ದಾರೆ. ಹೆತ್ತವರು, ಹೆಂಡತಿ, ಮಕ್ಕಳು, ಸಹೋದರ, ಸಹೋದರಿ, ಅಜ್ಜ, ಅಜ್ಜಿ ಹೀಗೆ ಇಡೀ ಕುಟುಂಬವೇ ಅತಿಥಿ ಬೋಧಕರ ಅಲ್ಪ ಗೌರವಧನದ ಮೇಲೆ ಅವಲಂಬಿತವಾಗಿದೆ. ಅಲ್ಲದೆ, ಜುಲೈನಿಂದ ವೇತನ ಇಲ್ಲ. 7-8 ತಿಂಗಳು ಕಡಿಮೆ ವೇತನಕ್ಕೆ ದುಡಿಯುತ್ತಿದ್ದೇವೆ. ಸರ್ಕಾರಿ, ಆಧುನಿಕ ಜೀತದಂತೆ ನಮ್ಮನ್ನು ದುಡಿಸಿಕೊಂಡು, ಶೋಷಿಸಲಾಗುತ್ತಿದೆ. ಹೀಗಾಗಿ ಇಂದು ನಾವು ಸಾಂಕೇತಿಕವಾಗಿ ಸೊಪ್ಪು, ಕಡ್ಲೇಗಿಡ, ಟೀ ಮಾರಿ ನಮ್ಮ ಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡುತ್ತಿದ್ದೇವೆ. ಈಗಲಾದರೂ ಸರ್ಕಾರ ಎಚ್ಚೆತ್ತು ದೇಶದ ಭವಿಷ್ಯ ರೂಪಿಸುವ ನಮ್ಮ ಭವಿಷ್ಯ ಉತ್ತಮಗೊಳಿಸಬೇಕು ಎಂದು ಪ್ರತಿಭಟನಾನಿರತರು ಮನವಿ ಮಾಡಿದರು.

ಸಂಘದ ಮುಖಂಡರಾದ ಎಸ್.ಶುಭಾ, ಎಂ.ಜಗದೀಶ, ಎಂ.ಕೆ.ಶೀತಲ್, ನರೇಂದ್ರ ರಾಥೋಡ್, ಬಿ.ಪಿ.ರವೀಂದ್ರ, ಅನಂತಾಚಾರಿ, ಡಾ.ಸಿ.ಹೆಚ್.ಪ್ರವೀಣ ಕುಮಾರ, ಆರ್.ಸಂತೋಷ ಕುಮಾರ, ಎಂ.ಆರ್.ರಾಘವೇಂದ್ರ, ಬಿ.ಜಿ.ಸಿದ್ದೇಶಪ್ಪ, ಎಸ್.ವೆಂಕಟೇಶ, ಇ.ಬೋರೇಶ, ಜಿ.ಬಿ.ಮಂಜುಳಾ, ಇ.ವಿ.ಮಾನಸ, ಎಂ.ಎಸ್.ಸ್ಮಿತಾ, ಜಿ.ಬಿ.ಅರುಣ ಕುಮಾರಿ, ಸಮೀನಾ ಎಂ.ರಫಿ, ಇ.ರೇಖಾ, ಟಿ.ಎಸ್.ಲಕ್ಷ್ಮಿದೇವಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!