ಹೊಸದಿಗಂತ ವರದಿ ಅಂಕೋಲಾ:
ಪಾರ್ಶ್ವವಾಯು ಮತ್ತು ನೋವಿಗೆ ಔಷಧ ನೀಡುವುದಾಗಿ ಬಂದ ವ್ಯಕ್ತಿಯೋರ್ವ ಔಷದೋಪಚಾರದ ಹೆಸರಿನಲ್ಲಿ ಸಾವಿರಾರು ರೂಪಾಯಿ ಹಣ ಪಡೆದು ನಾಪತ್ತೆಯಾದ ಘಟನೆ ತಾಲೂಕಿನ ಭಾವಿಕೇರಿಯಲ್ಲಿ ನಡೆದಿದೆ.
ಜನವರಿ 26 ರಂದು ಬೆಳಿಗ್ಗೆ ಭಾವಿಕೇರಿ ನಿವಾಸಿ ವೀಣಾ ನಾನಾ ಭಟ್ಟ ಅವರ ಮನೆಗೆ ಅಪರಿಚಿತ ವ್ಯಕ್ತಿಯೋರ್ವ ಬಂದು ಪಾರ್ಶ್ವವಾಯು ಮತ್ತು ನೋವಿಗೆ ಔಷದಿ ನೀಡುವುದಾಗಿ ತಿಳಿಸಿದ್ದು ವೀಣಾ ಭಟ್ಟ ಅವರು ತಮ್ಮ ಅತ್ತೆಗೆ ಪಾರ್ಶ್ವವಾಯು ಆಗಿರುವುದರಿಂದ ಆ ವ್ಯಕ್ತಿಗೆ ಒಳಗೆ ಕರೆದು ಔಷದಿ ನೀಡಲು ಹೇಳಿದ್ದಾರೆ ಅವರ ಅತ್ತೆಯನ್ನು ನೋಡಿದ ಅಪರಿಚಿತ ವ್ಯಕ್ತಿ ಅವರಿಗೆ ಒಂದು ಬದಿ ಪೂರ್ತಿ ಪಾರ್ಶ್ವವಾಯು ಆಗಿರುವುದರಿಂದ ತಾನು ಕೊಡುವ ಔಷದಿ ಅವರಿಗೆ ನಾಟುವುದಿಲ್ಲ ಎಂದು ತಿಳಿಸಿದ್ದಾನೆ.
ವೀಣಾ ಭಟ್ಟ ಅವರು ತಮಗೆ ಮತ್ತು ತಮ್ಮ ಪತಿಗೆ ಕಾಲುನೋವು ಮತ್ತು ಸೊಂಟ ನೋವು ಇರುವುದಾಗಿ ಹೇಳಿದ್ದು ಅಪರಿಚಿತ ವ್ಯಕ್ತಿ ಅವರಿಗೆ ಎಣ್ಣೆಯಂತ ವಸ್ತುವನ್ನು ನೋವು ಇರುವಲ್ಲಿ ಹಚ್ಚಿ ನೀರಿನಂತ ದ್ರವ ಪದಾರ್ಥವನ್ನು ಕುಡಿಯಲು ನೀಡಿದ್ದು ಔಷದಿಗೆ 63 ಸಾವಿರ ರೂಪಾಯಿ ನೀಡುವಂತೆ ಹೇಳಿದ್ದಾನೆ ಎನ್ನಲಾಗಿದೆ.
ಆತ ಕುಡಿಸಿದ ಅಥವಾ ಹಚ್ಚಿದ ವಸ್ತುವಿನ ಪ್ರಭಾವದಿಂದ ಏನು ತಿಳಿಯದಂತಾದ ದಂಪತಿ ವ್ಯವಹಾರದ ಉದ್ದೇಶದಿಂದ ಇಟ್ಟ ಹಣವನ್ನು ಅಪರಿಚಿತ ವ್ಯಕ್ತಿಗೆ ನೀಡಿ ಕಳಿಸಿದ್ದು ಸ್ವಲ್ಪ ಸಮಯದ ನಂತರ ತಾವು ಮೋಸ ಹೋಗಿರುವುದಾಗಿ ಅರಿವಿಗೆ ಬಂದಿದೆ.
ನಂತರ ಆ ಅಪರಿಚಿತ ವ್ಯಕ್ತಿ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹಣ ಮರಳಿಸುವಂತೆ ಕೇಳಿಕೊಂಡರೂ ಆತ ಹಣ ಮರಳಿ ನೀಡದಿರುವ ಕಾರಣ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.