ಹೊಸದಿಗಂತ ವರದಿ, ಅಂಕೋಲಾ:
ವ್ಯಕ್ತಿಯೋರ್ವರು ಕಾಲು ಜಾರಿ ಹೊಳೆಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಅಚವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಬಗಿಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗ್ಗಿನಳ್ಳಿ ನಿವಾಸಿ ಹಾಲಿ ಮಾಬಗಿಯಲ್ಲಿ ವಾಸವಾಗಿದ್ದ ಸೋಮಣ್ಣ ಹನುಮಪ್ಪ ನಿಟ್ಟೂರು(75) ಮೃತ ವ್ಯಕ್ತಿಯಾಗಿದ್ದು 30 ವರ್ಷಗಳ ಹಿಂದೆ ಯಾಣ ವಡ್ಡಿ ರಸ್ತೆ ಕೆಲಸಕ್ಕೆ ಬಂದಿದ್ದ ಈತ ರಸ್ತೆ ಕಾಮಗಾರಿ ಮುಗಿದ ನಂತರವೂ ಮಾಬಗಿ ಹೊಳೆಯ ಬದಿಯಲ್ಲಿ ಸಣ್ಣ ತೋಟ ಮಾಡಿಕೊಂಡು ಹೆಂಡತಿ ಜೊತೆಗೆ ವಾಸವಾಗಿದ್ದ.
ನಾಲ್ಕೈದು ತಿಂಗಳುಗಳ ಹಿಂದೆ ಪಾರ್ಶ್ವವಾಯು ಕಾಯಿಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಈತ ಜನವರಿ 19 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ತನ್ನ ಮನೆಯ ಹಿಂಬದಿಗೆ ಹೊಳೆಗೆ ಹಾಕಿರುವ ಪಂಪಸೆಟ್ ಚಾಲು ಮಾಡುವುದಾಗಿ ಹೇಳಿ ಹೊರಟವನು ಆಕಸ್ಮಿಕ ಕಾಲು ಜಾರಿ ಹೊಳೆಯ ನೀರಿಗೆ ಬಿದ್ದು ಮುಳುಗಿದ್ದು, ಜನವರಿ 20 ರಂದು ಹೊಳೆಯಲ್ಲಿ ಮೃತದೇಹ ದೊರಕಿದೆ.
ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.


