ಹೊಸದಿಗಂತ ಡಿಜಿಟಲ್ ಡೆಸ್ಕ್:
ಮರದಲ್ಲಿ ಸಿಲುಕಿದ್ದ ಹಾಸಿಗೆ ತೆಗೆಯಲು ಹೋಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಮಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತನನ್ನು ವಿಜಯ್ ಗುಪ್ತಾ(35) ಎಂದು ಗುರುತಿಸಲಾಗಿದ್ದು, ಆತ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಪಕ್ಕದ ಕಟ್ಟಡದ ಮರದಲ್ಲಿ ಹಾಸಿಗೆ ಸಿಲುಕಿಕೊಂಡಿದ್ದನ್ನು ಗಮನಿಸಿದ ವಿಜಯ್, ಹಾಸಿಗೆಯನ್ನು ತೆಗೆಯಬೇಕೆಂಬ ಉದ್ದೇಶದಿಂದ ತಮ್ಮ ಕಟ್ಟಡದ ಮೇಲೆ ಹತ್ತಿದ್ದ. ಎರಡನೇ ಮಹಡಿಯಿಂದ ಹಾಸಿಗೆಯನ್ನು ತೆಗೆಯಲು ಯತ್ನಿಸಿದ ವಿಜಯ್ ನಿಯಂತ್ರಣ ತಪ್ಪಿ ಕಟ್ಟಡದಿಂದ ಕೆಳಗೆ ಬಿದ್ದಿದ್ದಾನೆ.
ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಪ್ರತ್ಯಕ್ಷದರ್ಶಿಯೊಬ್ಬರು ಈ ಕುರಿತು ಮಾತನಾಡಿದ್ದು, ಗಾಳಿ ಬೀಸಿದ್ದರಿಂದ ಹಾಸಿಗೆ ಮರದಲ್ಲಿ ಸಿಲುಕಿಕೊಂಡಿರಬಹುದು. ಹಾಸಿಗೆ ತೆಗೆಯುವ ಪ್ರಯತ್ನ ಬೇಡ ಎಂದು ಗುಪ್ತಾಗೆ, ಆತನ ಕುಟುಂಬಸ್ಥರು ಹೇಳಿದರೂ ಅವರ ಮಾತಿಗೆ ಬೆಲೆ ಕೊಡದೇ ಛಾವಣಿ ಏರಿದ್ದ. ಹೀಗಾಗಿ ಈ ದುರ್ಘಟನೆ ನಡೆದಿದೆ ಎಂದಿದ್ದಾರೆ.
ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.