ವ್ಯಕ್ತಿಯನ್ನು ಅರೆಬೆತ್ತಲೆ ಮಾಡಿ ಬಾಯಿಯಿಂದ ಶೂ ಎತ್ತಲು ಒತ್ತಾಯ: ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿಗಳ ಅರೆಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಮಧ್ಯಪ್ರದೇಶದ ರೇವಾ (Rewa) ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಅರೆಬೆತ್ತಲೆ ಮಾಡಿ, ಆತನ ಬಾಯಿಯಿಂದ ಶೂ ಎತ್ತಿಕೊಳ್ಳುವಂತೆ ಒತ್ತಾಯಿಸಿದ ಘಟನೆ ನಡೆದಿದೆ.

ಈ ಘಟನೆಯ ವಿಡಿಯೊ ವೈರಲ್ (Viral Video) ಆದ ಬೆನ್ನಲ್ಲೇ ಪ್ರಮುಖ ಆರೋಪಿ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ವ್ಯಕ್ತಿಯ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿ ಆತನಿಗೆ ಹಿಂಸೆ ನೀಡುತ್ತಿರುವ ಈ ವಿಡಿಯೊ ಎರಡು ವರ್ಷಗಳಿಗಿಂತಲೂ ಹಳೆಯದು. ಆಸ್ತಿ ವಿವಾದವೇ ಇದಕ್ಕೆ ಕಾರಣ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಡಿಯೊ ನೋಡಿದ ಮೇಲೆ ನಾವು ಪ್ರಮುಖ ಆರೋಪಿ ಜವಾಹರ್ ಸಿಂಗ್ (55), ಗೊಂಡ್ ಬುಡಕಟ್ಟಿನ ಸದಸ್ಯ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದೇವೆ ಎಂದು ರೇವಾ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸಿಂಗ್ ತಿಳಿಸಿದ್ದಾರೆ.

ಕಳೆದ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಈ ವಿಡಿಯೊ ಮೇ 2021 ರಲ್ಲಿ ರೇವಾದಲ್ಲಿನ ಹನುಮ್ನಾ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪ್ರಾಹಿ ಗ್ರಾಮದಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಅವರು ಹೇಳಿದರು .

ಪ್ರಮುಖ ಆರೋಪಿಯು ಸರ್ಕಾರಿ ಶಾಲೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದು, ಗ್ರಾಮದ ಸರಪಂಚ್‌ನ ಪತಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈತ ಇನ್ನೊಬ್ಬ ವ್ಯಕ್ತಿಯನ್ನು ಅಪಹರಿಸಿ, ಅವನನ್ನು ಅರೆಬೆತ್ತಲೆ ಮಾಡಿ, ಅವನ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿ, ಗುದ್ದಿದ್ದಾನೆ. ಆತನ ಬಾಯಿಯಿಂದ ಶೂ ಎತ್ತುವಂತೆ ಮಾಡಿದ್ದಾನೆ ಎಂದು ಎಸ್ಪಿ ಹೇಳಿದ್ದಾರೆ.

ಜವಾಹರ್ ಸಿಂಗ್ ಮತ್ತು ಇತರ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶನಿವಾರ ಎಫ್‌ಐಆರ್ ದಾಖಲಿಸಲಾಗಿದೆ. ಸ್ಥಳೀಯ ನ್ಯಾಯಾಲಯ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!