ಹೊಸದಿಗಂತ ವರದಿ ಮಡಿಕೇರಿ:
ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಅಪರಾಧಿಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷಗಳ ಕಠಿಣ ಸಜೆ,15 ಸಾವಿರ ರೂ.ದಂಡ ಹಾಗೂ ಸಂತ್ರಸ್ತೆಗೆ ನಾಲ್ಕು ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ಲೈನ್ ಮನೆಯಲ್ಲಿ ವಾಸವಿದ್ದ ಮೂಲತಃ ಅಸ್ಸಾಂ ರಾಜ್ಯದ ಕಾರ್ಮಿಕ ತಲ ಎಂಬಾತನೇ ಶಿಕ್ಷೆಗೆ ಗುರಿಯಾದವನಾಗಿದ್ದಾನೆ.
ಘಟನೆ ಹಿನ್ನೆಲೆ : ಕಳೆದ ಸಾಲಿನ ಜುಲೈ 20ರಂದು ಮಧ್ಯಾಹ್ನ ಲೈನ್’ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ 7 ವರ್ಷ ಪ್ರಾಯದ ಅಪ್ರಾಪ್ತ ನೊಂದಬಾಲಕಿಗೆ ಮೊಬೈಲ್ ಕೊಡುವುದಾಗಿ ಹೇಳಿ ಆಕೆಯನ್ನು ಅಯ್ಯಂಗೇರಿ ಗ್ರಾಮದ ಕಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ಅತ್ಯಾಚಾರ ಮಾಡಿರುವುದಲ್ಲದೆ, ಹೋಂ ಸ್ಟೇ ಕಟ್ಟಡಕ್ಕೆ ಮತ್ತು ಆರೋಪಿಯ ಲೈನ್’ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ಅತ್ಯಾಚಾರ ಎಸಗಿದ್ದಾಗಿ ನೊಂದ ಬಾಲಕಿಯ ತಾಯಿ ಭಾಗಮಂಡಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ ಮಡಿಕೇರಿ ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಪಿ.ಅನೂಪ್ ಮಾದಪ್ಪ ಅವರು, ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೋ ಕಾಯ್ದೆ ಅಡಿಯ ಅಪರಾಧಕ್ಕಾಗಿ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಕೆ.ಬಸವರಾಜ್ ಅವರು ಪ್ರಕರಣದ ವಿಚಾರಣೆ ನಡೆಸಿ, ಆರೋಪವು ಸಾಕ್ಷ್ಯಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಲೈಂಗಿಕ ಅತ್ಯಾಚಾರ ಅಪರಾಧಕ್ಕೆ ಭಾರತೀಯ ನ್ಯಾಯ ಸಂಹಿತೆ 2023 ಅಡಿಯಲ್ಲಿ 20 ವರ್ಷ ಕಠಿಣ ಸಜೆ ಮತ್ತು ₹10000 ದಂಡ, ಪೋಕ್ಸೋ ಕಾಯ್ದೆ ಅಡಿಯಲ್ಲಿ 20 ವರ್ಷ ಕಠಿಣ ಸಜೆ ಮತ್ತು ₹5000ದಂಡ ಹಾಗೂ ನೊಂದ ಬಾಲಕಿಗೆ ನಾಲ್ಕು ಲಕ್ಷ ಪರಿಹಾರ ನೀಡಬೇಕೆಂದು ತೀರ್ಪು ನೀಡಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಅಭಿಯೋಜಕ ಬಿ.ಎಸ್ ರುದ್ರಪ್ರಸನ್ನ ವಾದ ಮಂಡಿಸಿದರು.