ಹೊಸದಿಗಂತ ಡಿಜಿಟಲ್ ಡೆಸ್ಕ್:
ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಕುತ್ತಿಗೆಗೆ ವೇಲು ಬಿಗಿದು ಹತ್ಯೆ ಮಾಡಿ ಬಳಿಕ ಮೃತದೇಹವನ್ನು ನಾಲೆಗೆ ಎಸೆದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ.
ಶ್ರೀನಾಥ್ (32) ಎಂಬಾತ ಕೊಲೆ ಮಾಡಿದ ಆರೋಪಿ. ಹತ್ಯೆಗೀಡಾದ ಪತ್ನಿ ಪೂಜಾ (28) ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಶ್ರೀನಾಥ್ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಗಂಡ ಹೆಂಡತಿ ಜಗಳ ಆಡುವಾಗ ಆತ ವೇಲ್‌ನಿಂದಲೇ ಪೂಜಾ ಕತ್ತನ್ನು ಬಿಗಿದಿದ್ದಾನೆ. ಇದರಿಂದ ಆಕೆ ಉಸಿರುಗಟ್ಟುತ್ತಿದ್ದಂತೆ ಮಹದೇವ ಪುರ ಬಳಿಯ ನಾಲೆಯಲ್ಲಿ ಎಸೆದು ಪರಾರಿಯಾಗಿದ್ದಾನೆ.
ಪೂಜಾ ಕಾಣಿಸುತ್ತಿಲ್ಲ ಎಂದು ಆಕೆಯ ಮನೆಯವರು ದೂರು ನೀಡಿದ್ದು, ಪೊಲೀಸರು ಕೂಡಾ ವಿಚಾರಣೆ ನಡೆಸಿದ್ದರು. ಆದರೆ, ಶ್ರೀನಾಥ್ ಪರಾರಿಯಾಗಿದ್ದರಿಂದ ಆತನೇ ಕೊಂದು ಎಲ್ಲೋ ಎಸೆದು ಪರಾರಿಯಾಗಿರುವ ಸಂಶಯ ಹುಟ್ಟಿಕೊಂಡಿತ್ತು. ಇದೀಗ ಮಹದೇವಪುರ ಬಳಿಯ ನಾಲೆಯಲ್ಲಿ ಆಕೆಯ ಊದಿಕೊಂಡ ಶವ ಪತ್ತೆಯಾಗಿದೆ. ಇದೊಂದು ಕೊಲೆ ಎಂದು ತಿಳಿದುಬಂದಿದೆ.
ಪೊಲೀಸರು ಆರೋಪಿ ಶ್ರೀನಾಥ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆತನನ್ನು ಬಂಧಿಸಿದ ಬಳಿಕವೇ ವಿಷಯ ಬಯಲಾಗುವ ನಿರೀಕ್ಷೆ ಇದೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.