ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್ಸಿನಲ್ಲಿ ಸಿಕ್ಕ ಲಕ್ಷಾಂತರ ಮೌಲ್ಯದ ಬಂಗಾರ, ಬೆಳ್ಳಿ ಸಾಮಾನು ಹಿಂದುರುಗಿಸಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬೆಳಕಿಗೆ ಬಂದಿದೆ.
ಹೊಸಪೇಟೆ ತಾಲೂಕಿನ ಮಲಪನಗುಡಿಯ ರಾಘವೇಂದ್ರ ಬಸ್‌ನಲ್ಲಿ ಸಿಕ್ಕಿದ್ದ ಬಂಗಾರ, ಬೆಳ್ಳಿ ಆಭರಣದ ವಸ್ತುಗಳನ್ನು ಹಿಂದುರಿಗಿಸಿ ಪ್ರಾಮಾಣಿಕತೆ ಮೆರೆದಾತ. 45 ಗ್ರಾಂ ಮೌಲ್ಯದ ಮೂರು ಬಂಗಾರದ ಚೈನ್, 5 ಗ್ರಾಂನ 1 ಜೊತೆ ಬಂಗಾರದ ಕಿವಿಯೋಲೆ, 10 ಗ್ರಾಂ ಮೂರು ಬಂಗಾರದ ಉಂಗುರ, 80 ಗ್ರಾಂ ಮೌಲ್ಯದ ಬೆಳ್ಳಿ ಕಡಗ, ದೇವಿಯ ಮೂರ್ತಿ ಬ್ಯಾಗ್ ನಲ್ಲಿತ್ತು.
ಹೂವಿನ ಹಡಗಲಿಯ ಮುದುಕಪ್ಪ ಶೇಗಡಿ ಎನ್ನುವವರು ಹೂವಿನ ಹಡಗಲಿಯಿಂದ ಹೊಸಪೇಟೆಗೆ ಬಸ್ಸಿನಲ್ಲಿ ಮಗನ ಮನೆಗೆ ಬರುತ್ತಿದ್ದರು. ಹೊಸಪೇಟೆಯ ಚೆಕ್ ಪೋಸ್ಟ್ ಬಳಿ, ಬಸ್ ಇಳಿಯುವಾಗ ಮುದುಕಪ್ಪ ಬ್ಯಾಗ್ ಮರೆತು ಇಳಿದಿದ್ದಾರೆ. ಅದೇ ವೇಳೆ ಬಸ್ ನಲ್ಲಿ ಬಂದಿದ್ದ ಕೋರಿಯರ್ ತರಲು ರಾಘವೇಂದ್ರ ಬಂದಿದ್ದರು.
ಆಗ ಬಸ್ ನಲ್ಲಿದ್ದ ಅಪರಿಚಿತ ಪ್ರಯಾಣಿಕನೊಬ್ಬ ರಾಘವೇಂದ್ರನ ಕೈಗೆ ಬ್ಯಾಗ್ ಕೊಟ್ಟು ಬಸ್ ಇಳಿದು ಹೋಗಿದ್ದಾರೆ. ಅದೇ ಸ್ಥಳದಲ್ಲಿ ರಾಘವೇಂದ್ರ ಬ್ಯಾಗ್ ಹಿಡಿದುಕೊಂಡು ಅರ್ಧ ಗಂಟೆ ಕಾದಿದ್ದ. ಅರ್ಧ ಗಂಟೆ ಕಾದ್ರೂ ಬಸ್ ನಿಲ್ದಾಣದ ಬಳಿ ಯಾರೂ ಬರಲಿಲ್ಲ. ಆಗ ಸಹಜವಾಗಿ ಬ್ಯಾಗ್ ಓಪನ್ ಮಾಡಿ ನೋಡಿದ ರಾಘವೇಂದ್ರಗೆ ಅದರಲ್ಲಿ ಚಿನ್ನಾಭರಣ ಇರುವುದು ಕಂಡಿದೆ. ಬ್ಯಾಗ್‌ನಲ್ಲಿ ಬಂಗಾರ ನೋಡಿದ ಕೂಡಲೇ ರಾಘವೇಂದ್ರ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.