February 3, 2026
Tuesday, February 3, 2026
spot_img

ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ವ್ಯಕ್ತಿಗೆ ಜೈಲು ಶಿಕ್ಷೆಯ ತೀರ್ಪು

ಹೊಸದಿಗಂತ ಹುಬ್ಬಳ್ಳಿ:

ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಹಣ ಸುಲಿಗೆ ಮಾಡಿದ ಆರೋಪಿಗೆ ಇಲ್ಲಿನ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

2016ರ ಜೂನ್ 16ರಂದು ಕನಕಪುರ ತಾಲೂಕಿನ ಬಿಜ್ಜಳ್ಳಿ ತಾಂಡಾ ನಿವಾಸಿ ಬಾಲು ನಾಯಕ್ ಎಂಬುವವರು ತಾರಿಹಾಳ ಕೆಳಸೇತುವೆ ಹತ್ತಿರ ಪುಣಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ, ಹಳೇ ಹುಬ್ಬಳ್ಳಿಯ ಶಾಂತಪ್ಪ ವೀರಾಪುರ ಮತ್ತು ಮಹದೇವ ಭರಮಣ್ಣವರ ಎಂಬುವವರು ಬೈಕ್ ಅಡ್ಡಗಟ್ಟಿದ್ದರು. ಬಾಲು ನಾಯಕ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಅವರ ಬಳಿಯಿದ್ದ 58,000 ರೂ. ಗಳನ್ನು ದೋಚಿದ್ದರು.

ಈ ಕುರಿತು ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭುಗೌಡ ಡಿ.ಕೆ. ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪಲ್ಲವಿ ಬಿ.ಆರ್. ಅವರು, ಶಾಂತಪ್ಪ ವೀರಾಪುರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐಪಿಸಿ ಕಲಂ 392 ಹಾಗೂ 394ರ ಅಡಿ ಶಿಕ್ಷೆ ಪ್ರಕಟಿಸಿದ್ದಾರೆ.

ಶಿಕ್ಷೆ: 10 ವರ್ಷ ಜೈಲು ವಾಸ.

ದಂಡ: 20,000 ರೂಪಾಯಿಗಳು.

ಪ್ರಕರಣದ ಮತ್ತೊಬ್ಬ ಆರೋಪಿ ಮಹದೇವ ವಿರುದ್ಧ ‘ಸ್ವೀಪ್ ಔಟ್’ ಪ್ರಕ್ರಿಯೆ ಜಾರಿಯಲ್ಲಿದೆ. ಸರ್ಕಾರದ ಪರವಾಗಿ ಅಭಿಯೋಜಕರಾದ ಬಿ.ವಿ. ಪಾಟೀಲ ಅವರು ವಾದ ಮಂಡಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !