ಎನರ್ಜಿ ಡ್ರಿಂಕ್ಸ್ ಕುಡಿದು ವ್ಯಕ್ತಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಹೊಸದಿಗಂತ, ಮಡಿಕೇರಿ: 

ಎನರ್ಜಿ ಡ್ರಿಂಕ್ ಕುಡಿದು ವ್ಯಕ್ತಿಯೊಬ್ಬರು ಅಸ್ವಸ್ಥರಾದ ಘಟನೆ ಮಡಿಕೇರಿಯಲ್ಲಿ ನಡೆದಿದ್ದು, ಈ ಹಿನ್ನೆಲೆಯಲ್ಲಿ ಆ ಉತ್ಪಾದನಾ ದಿನಾಂಕ ಮತ್ತು ಬ್ಯಾಚ್‌ನ ಪಾನೀಯವನ್ನು ವ್ಯಾಪಾರಸ್ಥರು ಮಾರಾಟ ಮಾಡದಂತೆ ಮತ್ತು ಸಾರ್ವಜನಿಕರು ಖರೀದಿಸದಂತೆ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತಾಧಿಕಾರಿ ಡಾ. ಅನಿಲ್ ಧಾವನ್ ಅವರು ಎಚ್ಚರಿಸಿದ್ದಾರೆ.

ಮಡಿಕೇರಿಯ ವ್ಯಕ್ತಿಯೊಬ್ಬರು ಸೋಮವಾರ ನಗರದ ಆಹಾರ ಪದಾರ್ಥ ಮಾರಾಟ ಮಳಿಗೆಯೊಂದರಿಂದ ಖರೀದಿಸಿದ ‘ರೆಡ್ ಬುಲ್ ಎನರ್ಜಿ ಡ್ರಿಂಕ್’ ಕುಡಿದ ಬಳಿಕ ಅಸ್ವಸ್ಥರಾಗಿದ್ದು, ಅವರನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಅವರು ನೀಡಿದ ದೂರಿನ ಹಿನ್ನೆಯಲ್ಲಿ 2023ರ ಫೆ.6ರಂದು ತಯಾರಿಸಲಾದ ಮತ್ತು 2025ರ ಫೆ.6ಕ್ಕೆ ಅವಧಿ ಮುಕ್ತಾಯವಾಗಲಿರುವ ರೆಡ್ ಬುಲ್ ಪಾನೀಯದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಆದುದರಿಂದ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರೆಡ್ ಬುಲ್ ಎನರ್ಜಿ ಡ್ರಿಂಕ್’ನ ಮೇಲ್ಕಂಡ ಉತ್ಪಾದನಾ ಮತ್ತು ಬ್ಯಾಚ್ ಸಂಖ್ಯೆಯ 250 ಎಂಎಲ್’ನ ಟಿನ್’ಗಳನ್ನು ಜಿಲ್ಲೆಯ ಆಹಾರ ಪದಾರ್ಥ ಮಾರಾಟಗಾರರು ಸಾರ್ವಜನಿಕರಿಗೆ ಮಾರಾಟ ಮಾಡದಂತೆ‌ ಮತ್ತು ಈಗಾಗಲೇ ಸಾರ್ವಜನಿಕರು ಈ ಬ್ಯಾಚ್ ನ ಪಾನೀಯವನ್ನು ಖರೀದಿಸಿದ್ದರೆ ಅದನ್ನು ಸೇವನೆ ಮಾಡದೆ ಖರೀದಿಸಿದ ಅಂಗಡಿಗಳಿಗೆ ನಿಯಮಾನುಸಾರ ಹಿಂದಿರುಗಿಸುವಂತೆ ಡಾ. ಅನಿಲ್ ಧಾವನ್ ಅವರು ಕೋರಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!