ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ರಾಜ್ಯದಲ್ಲಿ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿವಾದ ಬುಗಿಲೆದ್ದಿದೆ. ಈ ಮಧ್ಯೆ ಪಶು ಸಂಗೋಪನಾ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು, ಆಹಾರಕ್ಕಾಗಿ ಪ್ರಾಣಿವಧೆ ಮಾಡುವಾಗ ಹಿಂಸೆ ಮಾಡಬಾರದು ಎಂದು ಸೂಚಿಸಿದೆ.
ಅದರಂತೆ, ಇನ್ನು ಮುಂದೆ ಆಹಾರಕ್ಕಾಗಿ ಪ್ರಾಣಿಗಳ ವಧೆಗೆ ಸ್ಟನ್ನಿಂಗ್ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ. ಆದರೆ ಇದು ಬೆಂಗಳೂರಿಗೆ ಮಾತ್ರ ಅನ್ವಯಿಸುತ್ತದೆ.
ಪಶುಸಂಗೋಪನಾ ಇಲಾಖೆ ಸುತ್ತೋಲೆ ಹೊರಡಿಸಿ, ಪ್ರಾಣಿ ವಧೆ ಮಾಡುವ ಮುನ್ನ ಸ್ಟನ್ನಿಂಗ್ ಮಾಡಿಸಲೇಬೇಕೆಂದು ಕೋಳಿ, ಕುರಿ ಅಂಗಡಿಗಳಿಗೆ ಆದೇಶ ನೀಡಿದೆ. ಪ್ರಾಣಿಗಳನ್ನು ವಧೆ ಮಾಡುವ ಮೊದಲು ಪ್ರಜ್ಞೆ ತಪ್ಪಿಸುವ ವಿಧಾನವೇ ಸ್ಟನ್ನಿಂಗ್. ಸ್ಟನ್ನಿಂಗ್ ಮಾಡುವುದರಿಂದ ಪ್ರಾಣಿಗಳನ್ನು ಸಾಯಿಸುವಾಗ ಅವುಗಳಿಗೆ ನೋವು ತಿಳಿಯುವುದಿಲ್ಲ. ಈ ಬಗ್ಗೆ ಹಿಂದೆಯೇ ಆದೇಶವಿದ್ದರೂ ಕಡ್ಡಾಯವಾಗಿ ಪಾಲನೆಯಾಗುತ್ತಿರಲಿಲ್ಲ. ಈ ಬಗ್ಗೆ ಅನೇಕ ದೂರುಗಳು ಪಶು ಸಂಗೋಪನಾ ಇಲಾಖೆಗೆ ಬಂದಿದ್ದವು. ಹೀಗಾಗಿ ಈಗ ಸ್ಟನ್ನಿಂಗ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.
ಆಹಾರಕ್ಕಾಗಿ ಪ್ರಾಣಿವಧೆ ಮಾಡುವಾಗ ಹಿಂಸೆ ನೀಡಬಾರದು. ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕು. ಬೆಂಗಳೂರು ವ್ಯಾಪ್ತಿಯಲ್ಲಿ ‘ಸ್ಟನ್ನಿಂಗ್’ ಮಾಡುವುದು ಕಡ್ಡಾಯ ಎಂದು ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಉಮಾಪತಿ ತಿಳಿಸಿದ್ದಾರೆ. ಪ್ರಾಣಿಗಳಿಗೆ ಹಿಂಸೆ ನೀಡಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದೇಶದ ಉಲ್ಲಂಘನೆ ಮಾಡಿದರೆ ₹ 50 ಸಾವಿರದಿಂದ ₹ 1 ಲಕ್ಷವರೆಗೆ ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ