ಹಿರಿಯ ಮುತ್ಸದ್ದಿ ರಾಜಕಾರಣಿ ಉಮೇಶ್ ಕತ್ತಿ ನಿಧನಕ್ಕೆ ಮಂಡ್ಯ ಬಿಜೆಪಿ ಕಂಬನಿ

ಹೊಸದಿಗಂತ ವರದಿ, ಮಂಡ್ಯ:
ಹಿರಿಯ ಮುತ್ಸದ್ದಿ ರಾಜಕಾರಣಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ನಿಧನಕ್ಕೆ ಜಿಲ್ಲಾ ಬಿಜೆಪಿ ಶ್ರದ್ದಾಂಜಲಿ ಸಲ್ಲಿಸಿದೆ.
ನಗರದ ವಿಕಾಸ ಭವನದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಮಾತನಾಡಿ, ಉಮೇಶ್ ಕತ್ತಿ ಅವರ ಅಕಾಲಿಕ ಮರಣಕ್ಕೆ ಇಡೀ ರಾಜಕೀಯ ವಲಯವೇ ಶೋಕ ಸಾಗರದಲ್ಲಿ ಮುಳುಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಪ್ರಭಾವಿ ರಾಜಕಾರಣದಲ್ಲಿ ಒಬ್ಬರಾಗಿದ್ದಾರೆ ಎಂದು ತಿಳಿಸಿದರು.
ಉಮೇಶ್ ಖತ್ತಿ ಅವರ ತಂದೆ ವಿಶ್ವನಾಥ್ ಕತ್ತಿ ಅವರೂ ಸಹ ವಿಧಾನಸಭಾ ಅಧಿವೇಶನ ಸಂದರ್ಭದಲ್ಲೇ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಆ ಬಳಿಕ ಉಮೇಶ್ ಕತ್ತಿ ಅವರು ಉಪ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳಿಂದ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು ಎಂದು ಹೇಳಿದರು.
ಬೆಳಗಾವಿಯ ಹುಕ್ಕೇರಿ ಕ್ಷೇತ್ರದಿಂದ ಸತತ 9 ಬಾರಿ ವಿವಿಧ ಪಕ್ಷಗಳಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಖತ್ತಿ ಅವರು ಯಾವುದೇ ಪಕ್ಷದಲ್ಲಿದ್ದರೂ ಜನ ಅವರನ್ನು ಆಯ್ಕೆ ಮಾಡುತ್ತಿದ್ದರು ಎಂದರೆ ಅಲ್ಲಿನ ಜನರ ಮನದಲ್ಲಿ ಅವರ ಯಾವ ಸ್ಥಾನ ಸಂಪಾದಿಸಿದ್ದರು ಎಂಬ ಸಂಗತಿ ವೇದ್ಯವಾಗುತ್ತದೆ ಎಂದು ಹೇಳಿದರು.
ಜನಾನುರಾಗಿ ಉಮೇಶ್ ಖತ್ತಿ ಅವರ ನಿಧನದಿಂದಾಗಿ ರಾಜ್ಯಕ್ಕೆ ನಷ್ಟವಾಗಿದೆ. ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ಮಾತನಾಡಿ, ಬೆಲ್ಲದ ಬಾಗೇವಾಡಿಯಂತಹ ಕುಗ್ರಾಮದಲ್ಲಿ ಅತ್ಯಂತ ಶ್ರೀಮಂತ ಮನೆತನದಲ್ಲಿ ಜನಸಿದರೂ ಉಮೇಶ್ ಕತ್ತಿ ಅವರು ಸಾಮಾಜಿಕ ಕಳಕಳಿ ಹೊಂದಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಅಭಿವೃದ್ಧಿ ಮಾಡಬೇಕು ಎಂಬ ತವಕ ಹೊಂದಿದ್ದರು ಎಂದು ಹೇಳಿದರು.
ಇಂತಹ ನಾಯಕನ್ನು ಕಳೆದುಕೊಂಡಿರುವ ಹುಕ್ಕೇರಿ ಕ್ಷೇತ್ರ, ಬೆಳಗಾವಿ ಜಿಲ್ಲೆಯ ಜನತೆ ಇಂದು ಅನಾಥರಾದಂತಾಗಿದೆ ಎಂದು ವಿಷಾದಿಸಿದರು.
ಬಿಜೆಪಿ ಮುಖಂಡರಾದ ವಸಂತ್, ನಗರಸಭಾ ಸದಸ್ಯರಾದ ಚಂದ್ರ, ಶಿವು ಕೆಂಪಯ್ಯ, ಪ್ರಸನ್ನ, ಶಿವಲಿಂಗಯ್ಯ, ನಾಗಣ್ಣ ಮಲ್ಲಪ್ಪ, ಹರ್ಷ ಮತ್ತಿತರರು ಉಮೇಶ್ ಕತ್ತಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!