Tuesday, October 3, 2023

Latest Posts

ಸಕ್ಕರೆ ನಾಡಿನಲ್ಲಿ ಮಾರ್ದನಿಸಿತು ʻಕಾವೇರಿ ನಮ್ಮದುʼ ಕೂಗು: ಬೀದಿಗಿಳಿದ ರೈತ ಹಿತರಕ್ಷಣಾ ಸಮಿತಿ

ಹೊಸದಿಗಂತ ವರದಿ ಮಂಡ್ಯ:

ಕಾವೇರಿ ನಮ್ಮವಳು ಯಾವುದಕ್ಕೂ ಕಾರಣಕ್ಕೂ ಅದನ್ನು ಇನ್ನೊಬ್ಬರಿಗೆ ಬಿಟ್ಟುಕೊಡುವ ಮಾತೇ ಇಲ್ಲ ಎಂಬ ಕೂಗು ಸಕ್ಕರೆ ನಾಡಿನಲ್ಲಿ ಜೋರಾಗಿದೆ. ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂದು ಕಾವೇರಿ ನೀರು ನದಿ ಪ್ರಾಧಿಕಾರ ಆದೇಶ ಮಾಡಿರುವುದನ್ನು ವಿರೋಧಿಸಿ ಜಿಲ್ಲಾ ರೈತ ರಕ್ಷಣಾ ಸಮಿತಿ ಮಂಡ್ಯದಲ್ಲಿ ಧರಣಿ ಆರಂಭಿಸಿದೆ.

ನಗರದ ಸರ್.ಎಂ.ವಿ ಪ್ರತಿಮೆ ಎದುರು ಸಮಿತಿಯ ಆಶ್ರಯದಲ್ಲಿ ಮಾಜಿ ಶಾಸಕರು, ರೈತರು, ಕನ್ನಡ ಪರ ಹೋರಾಟಗಾರರು. ರಾಜಕೀಯ ಪಕ್ಷಗಳ ಕಾರ್ಯಕರ್ತರು ಸೇರಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಪ್ರತಿಭಟನಾ ಧರಣಿ ನಡೆಸಿದರು.

ʻಕಾವೇರಿ ನಮ್ಮದು, ರಕ್ತ ಕೊಟ್ಟರೂ ನೀರು ಬಿಡೆವುʼ ಎಂಬ ಘೋಷವಾಕ್ಯದೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಒತ್ತಡ ತಂತ್ರದ ಹಿನ್ನೆಲೆಯಲ್ಲಿ ಪ್ರಾಧಿಕಾರ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂದು ಆದೇಶಿಸಿರುವುದು ಅವ್ಯೆಜ್ಞಾನಿಕ, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಜಲಾಶಯಗಳಿಂದ ನೀರು ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿದರು.

ತಮಿಳುನಾಡಿಗೆ ಸತತವಾಗಿ ನೀರು ಹರಿಸಿದ ಪರಿಣಾಮ 113 ಅಡಿ ಇದ್ದ ನೀರು 101 ಅಡಿಗೆ ಕುಸಿದಿದೆ. ರೈತರು ಬೆಳೆದಿರುವ ಬೆಳೆ ರಕ್ಷಣೆಗೆ ನೀರು ಇಲ್ಲದಂತಾಗಿದೆ, ಪ್ರಾಧಿಕಾರದ ಆದೇಶದಂತೆ ಮತ್ತೆ ತಮಿಳುನಾಡಿಗೆ ನೀರು ಬಿಟ್ಟರೆ ಫಸಲು ರಕ್ಷಣೆ ಇರಲಿ ಕುಡಿಯುವ ನೀರು ಕೂಡ ನೀರು ಇರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಬಿಟ್ಟಿರುವುದರಿಂದ ಮಂಡ್ಯ, ಮೈಸೂರು, ಬೆಂಗಳೂರು ಸೇರಿ ಎಂಟು ನಗರಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ, ತಕ್ಷಣ ಕಾವೇರಿ ನದಿಗೆ ಬಿಟ್ಟಿರುವ ನೀರನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಸರ್ಕಾರ ತಾಳ್ಮೆ ವಹಿಸಿ ತಮಿಳುನಾಡಿಗೆ ನೀರು ಬಿಡದೆ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್‌ಗೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಲು ಮುಂದಾಗಬೇಕಿತ್ತು, ಆದರೆ ಅದು ಬಿಟ್ಟು ತಮಿಳುನಾಡಿಗೆ ನೀರು ಹರಿಸುತ್ತಾ ಕೆಆರ್ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಕುಸಿತಕ್ಕೆ ಸರ್ಕಾರ ಕಾರಣವಾಗಿದೆ ಎಂದರು.

ಕಾವೇರಿ ನದಿ ನೀರು ವಿಚಾರದಲ್ಲಿ ಕೇಂದ್ರ ಸರ್ಕಾರ ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದಿದೆ, ಸಂಕಷ್ಟ ಬಂದಾಗ ಮಧ್ಯ ಪ್ರವೇಶಿಸಿ ಸಂಕಷ್ಟ ಸೂತ್ರ ಪಾಲಿಸಲು ಸೂಚನೆ ನೀಡುವುದಿಲ್ಲ,ಬದಲಾಗಿ ರಾಜ್ಯ ರಾಜ್ಯಗಳ ನಡುವೆ ಸಂಘರ್ಷ ಉಂಟುಮಾಡುತ್ತಿದೆ ಎಂದು ಕಿಡಿಕಾರಿದರು.

ಮೇಕೆದಾಟು ಯೋಜನೆಗೆ ಅಡ್ಡಿಪಡಿಸುವ ತಮಿಳುನಾಡು ಸರ್ಕಾರ ಕಾವೇರಿ ಜಲಾನಯನ ಪ್ರದೇಶದಲ್ಲಿ ನದಿ ಜೋಡಣೆ ಸೇರಿದಂತೆ ಹಲವು ನೀರಾವರಿ ಯೋಜನೆಗಳನ್ನು ಜಾರಿ ಮಾಡುತ್ತಿದೆ, ಕಾವೇರಿ ನದಿ ನೀರಿನ ಬಹುಪಾಲನ್ನು ಪಡೆಯಲು ಒತ್ತಡ ತಂತ್ರ ಅನುಸರಿಸಿ ಕರ್ನಾಟಕ ವಿರೋಧಿ ಧೋರಣೆ ಮಾಡುತ್ತಿದೆ ಎಂದರು.

ಕಾವೇರಿ ನದಿ ಪಾತ್ರದಲ್ಲಿನ ವಾಸ್ತವ ಪರಿಸ್ಥಿತಿ ಅರಿಯಲು ಮತ್ತು ಜಲಾಶಯಗಳಲ್ಲಿ ಇರುವ ನೀರಿನ ಲಭ್ಯತೆ ಬಗ್ಗೆ ಪರಿಶೀಲಿಸಲು ಕೇಂದ್ರ ಸರ್ಕಾರ ನೀರಾವರಿ ತಜ್ಜರ ತಂಡವನ್ನು ಕರ್ನಾಟಕಕ್ಕೆ ಕಳುಹಿಸಿ ಕೊಡುವ ಮೂಲಕ ವಾಸ್ತವ ಸ್ಥಿತಿ ಅರಿಯಲು ಮುಂದಾಗಬೇಕೆಂದು ಆಗ್ರಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!