ಕಬ್ಬು ಕಟಾವಿಗೆ ಒತ್ತಾಯಿಸಿ ಬೇವಿನ ಸೊಪ್ಪು ತಿಂದು ಪ್ರತಿಭಟಿಸಿದ ಮಂಡ್ಯ ರೈತರು

ದಿಗಂತ ವರದಿ ಮಂಡ್ಯ :

ಬರದ ನಡುವೆಯೂ ಕಬ್ಬು ಬೆಳೆದು ನಷ್ಟ ಅನುಭವಿಸಿರುವ ರೈತರ ಕಬ್ಬನ್ನು ಶೀಘ್ರ ಕಟಾವು ಮಾಡಿಸುವುದು, ಇಲ್ಲವೇ ಬೇರೆ ಕಾರ್ಖಾನೆಯವರಿಗೆ ಅವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿ ರೈತರು ಬೇವಿನ ಸೊಪ್ಪು ತಿಂದು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನಗರದ ಜೆ.ಸಿ. ವೃತ್ತದಲ್ಲಿ ಜಮಾಯಿಸಿದ ರೈತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಬೇವಿನ ಸೊಪ್ಪು ತಿನ್ನುತ್ತಲೇ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಮಂಡ್ಯ ತಾಲೂಕಿನ ವಿವಿಧೆಡೆ ರೈತರು ಬೆಳೆದಿರುವ ಕಬ್ಬಿಗೆ ಈಗಾಗಲೇ 14 ರಿಂದ 15 ತಿಂಗಳು ತುಂಬಿದೆ. ಬೆಳೆದು ನಿಂತ ಕಬ್ಬು ಒಣಗಲಾರಂಭಿಸಿದ್ದು, ಅದರ ರಸವೂ ಕಡಿಮೆಯಾಗುತ್ತಿದೆ. ಇದರಿಂದಾಗಿ ರೈತರು ಆತಂಕಪಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಂಡ್ಯದ ಮೈಷುಗರ್ ಕಾರ್ಖಾನೆಯವರು ಕಬ್ಬನ್ನು ಕಟಾವು ಮಾಡಿಸಿಕೊಳ್ಳಲಿಲ್ಲ. ಮತ್ತು ಇತರೆ ಕಾರ್ಖಾನೆಗಳಿಗೆ ಕಬ್ಬನ್ನು ಕಟಾವು ಮಾಡಲು ಅವಕಾಶವನ್ನೂ ಕೊಡುತ್ತಿಲ್ಲ. ಬ್ಯಾಂಕಿನಿಂದ ಸಾಲ ಮತ್ತು ಒಡವೆ ಸಾಲಗಳ ಹರಾಜಿಗಾಗಿ ನೋಟೀಸ್ ಬಂದಿರುತ್ತದೆ. ನ್ಯಾಯಾಲಯದಿಂದ ಬೆಳೆ ಸಾಲ ಕಟ್ಟಲು ಬ್ಯಾಂಕಿನ ಪರವಾಗಿ ನೋಟೀಸ್ ಕೊಟ್ಟಿರುತ್ತಾರೆ. ಪರಿಸ್ಥಿತಿ ಹೀಗಿದ್ದರೂ ಬೆಳೆದು ನಿಂತ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!