ಭಾರೀ ಮಳೆಗೆ ನಲುಗಿದ ಮಂಡ್ಯ: ಒಡೆದ ಕೆರೆ ಕೋಡಿ, ಬೆಳೆ ಜಲಾವೃತ, ರಸ್ತೆ ಸಂಚಾರ ಬಂದ್

ಹೊಸದಿಗಂತ ವರದಿ, ಮಂಡ್ಯ :
ಮಂಡ್ಯ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ವರುಣಾರ್ಭಟದಿಂದಾಗಿ ಕೆರೆ-ಕಟ್ಟೆಗಳು ಒಡೆದುಹೋಗಿದ್ದು, ನೂರಾರು ಎಕರೆ ಬೆಳೆ ಜಲಾವೃತವಾಗಿದೆ. ವಿವೇಕಾನಂದನಗರ ಬಡಾವಣೆ, ಬೀಡಿ ಕಾಲೋನಿಗಳಲ್ಲಿ ಅಪಾರ ಪ್ರಮಾಣದ ನೀರು ತುಂಬಿದೆ. ತಾಲೂಕಿನ ಬೂದನೂರು ಕೆರೆ ಕೋಡಿ ಒಡೆದು ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣ ನಿಲುಗಡೆಯಾಗಿದೆ.

ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಗರ ಬೀಡಿ ಕಾರ್ಮಿಕರ ಕಾಲೋನಿ ಸಂಪೂರ್ಣ ಜಲಾವೃತವಾಗಿದ್ದು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಸ್ಥಳೀಯರನ್ನು ಬೋಟ್ ಮೂಲಕ ಹೊರಗೆ ಕರೆತರುವ ಕೆಲಸ ಮಾಡುತ್ತಿದ್ದಾರೆ.
ತಾಲೂಕಿನ ಬೂದನೂರು ಕೆರೆ ಏರಿ ಒಡೆದು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಮದ್ದೂರು-ಮಂಡ್ಯ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಮದ್ದೂರು, ಕೆ.ಎಂ. ದೊಡ್ಡಿ ಮಳವಳ್ಳಿ ಮಾರ್ಗ ಬದಲಾಯಿಸಿ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಮುಂದಿನ ಎರಡು ದಿನಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಬೂದನೂರು ಕೆರೆ ಏರಿ ಒಡೆದು ನೀರು ಗದ್ದೆಗೆ ನುಗ್ಗಿ ಬಳಿಕ ಹೆದ್ದಾರಿಯನ್ನು ಆವರಿಸಿಕೊಂಡಿದೆ. ಇದರಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ವೇಳೆ ಭಾರೀ ಮಳೆಯಿಂದಾಗಿ ಹೆದ್ದಾರಿಗೆ ಕಾಮಗಾರಿ ಸ್ಥಳಕ್ಕೆ ನೀರು ನುಗ್ಗಿದೆ. ಪರಿಣಾಮ ಕಾಮಗಾರಿಗಾಗಿ ಹಾಕಲಾಗಿದ್ದ ಮಣ್ಣು ಸಹ ಕೊಚ್ಚಿಹೋಗಿದೆ.
ತಾಲೂಕಿನ ಬೇಲೂರು ಕೆರೆ ತುಂಬಿ ಹರಿಯುತ್ತಿದ್ದು, ಒಂದು ಪಾಶ್ವದಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೆರೆ ತುಂಬಿ ಏರಿ ಮೇಲೆ ಹರಿದ ಪರಿಣಾಮ ಆತಂಕ ಸೃಷ್ಠಿಯಾಗಿತ್ತು. ಕೋಡಿ ತುಂಬಿ ಹರಿದ ಪರಿಣಾಮ ಸ್ವಲ್ಪ ಪ್ರಮಾಣದಲ್ಲಿ ಆತಂಕ ಕಡಿಮೆಯಾದಂತಾಗಿದೆ.

ಮಂಡ್ಯ ನಗರದ ಕೆರೆಯಂಗಳದಲ್ಲಿರುವ ಬೀಡಿ ಕಾರ್ಮಿಕರ ಕಾಲೋನಿ ಕೆರೆಯಂತಾಗಿದೆ. ಮಕ್ಕಳು, ಮಹಿಳೆಯರು, ವಯೋ ವೃದ್ಧರು ನೀರು ತುಂಬಿದ ಮನೆಗಳಲ್ಲಿ ಸಿಲುಕಿಕೊಂಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ಅವರನ್ನು ಹೊರಗೆ ಕರೆತರುವ ಕೆಲಸ ಮಾಡುತ್ತಿದ್ದಾರೆ.

ತಾಲೂಕಿನ ಸಾತನೂರು ಕೆರೆ ಒಡೆದ ಪರಿಣಾಮ ಗ್ರಾಮದಲ್ಲಿ ನೀರು ತುಂಬಿದೆ. ವಿವೇಕಾನಂದ ಬಡಾವಣೆಯಲ್ಲಿರುವ ಎಲ್ಲ ರಸ್ತೆಗಳೂ ಮುಳುಗಡೆಯಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಕುಂಞ ಅಹಮದ್ ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣ ನಿವಾಸಿಗಳನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ಗಂಜೀ ಕೇಂದ್ರಕ್ಕೆ ಸ್ಥಳಾಂತರ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!