ಹೊಸ ದಿಗಂತ ವರದಿ, ಮಂಡ್ಯ:
ನಗರದ ಕೆರೆ ಬೀದಿಯಲ್ಲಿರುವ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ಎಲ್ಲಾ ಸ್ಕಂದ ದೇವಾಲಯಗಳಲ್ಲಿ ಶ್ರೀ ಸುಬ್ರಹ್ಮಣ್ಯ (ಸ್ಕಂದ) ಷಷ್ಠಿ ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಳಗ್ಗೆ 6 ಗಂಟೆಗೆ ಶ್ರೀ ಸ್ವಾಮಿಗೆ ಫಲ ಪಂಚಾಮೃತ ಪೂರ್ವಕ ಪವಮಾನ ಅಭಿಷೇಕ, ರುದ್ರಾಭಿಷೇಕ, ಬೆಣ್ಣೆ ಅಲಂಕಾರ ಏರ್ಪಡಿಸಲಾಗಿತ್ತು. 8.30ಕ್ಕೆ ಮಹಾಮಂಗಳಾರತಿ ನೆರವೇರಿತು.
ಬೆಳಗ್ಗೆ 9.30ಕ್ಕೆ ದೇವತಾ ಪ್ರಾರ್ಥನೆಯೊಂದಿಗೆ ಗುರು ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ಮಹಾಸಂಕಲ್ಪ, ಕಳಶ ಸ್ಥಾಪನೆ, ನವಗ್ರಹಪೂರ್ವಕ ಮಹಾಗಣಪತಿ ಹೋಮ, ಕಾಳಸರ್ಪ ಶಾಂತಿ ಹೋಮ, ಸುಬ್ರಹ್ಮಣ್ಯ ಮೂಲಮಂತ್ರ ಹೋಮ ಮತ್ತು ಆಶ್ಲೇಷ ಬಲಿಪೂಜೆ, ಮಧ್ಯಾಹ್ನ 12 ಮಹಾಪೂರ್ಣಾಹುತಿ, 12.30ಕ್ಕೆ ಮಹಾಮಂಗಳಾರತಿ ನೆರವೇರಿತು. ಬಳಿಕ ಪ್ರಸಾದ ವಿನಿಯೋಗ ನಡೆಯಿತು.
ಸಂಜೆ ಶ್ರೀವಲ್ಲಿ -ದೇವಸೇನಾ ಸಮೇತ ಶ್ರೀ ಬಾಲಸುಬ್ರಹ್ಮಣ್ಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಪಾಲ್ಗೊಂಡು ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದರ್ಶನ ಪಡೆದರು. ಬೆಳಗ್ಗೆಯಿಂದ ರಾತ್ರಿಯವರೆಗೂ ನೂರಾರು ಭಕ್ತರು ಆಗಮಿಸಿದ್ದರು.
ಹೋಮ-ಹವನದಲ್ಲೂ ಪಾಲ್ಗೊಂಡ ಭಕ್ತಜನ
ನಗರದ ಕುವೆಂಪುನಗರದಲ್ಲಿರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಬೆಳಗಿನಿಂದಲೂ ವಿಶೇಷ ಪೂಜೆ, ಹೋಮ, ಹವನ, ಕಾಳಸರ್ಪಶಾಂತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಸಾಂಗೋಪ ಸಾಂಗವಾಗಿ ನೆರವೇರಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಹೋಮ, ಹವನ, ಆಶ್ಲೇಷ ಬಲಿಪೂಜೆ, ಮಹಾಪೂರ್ಣಾಹುತಿ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯ ಗಳು ನೆರವೇರಿಸಲಾಯಿತು.