ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮನ್ಸೂರ್ ಅಲಿ ಲೋಕಾ ಬಲೆಗೆ

ಹೊಸದಿಗಂತ ವರದಿ,ಮಂಗಳೂರು:

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣಗಳಿಗೆ ಕೊನೆಯಾಗಿಲ್ಲ. ವಾರದ ಹಿಂದೆ ಬೃಹತ್ ಮೊತ್ತದ ಲಂಚದ ಹಣವಿದ್ದ ಬ್ಯಾಗ್‌ನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದರು. ಇದೀಗ ಮತ್ತೊದು ಪ್ರಕರಣ ಬೆಳಕಿಗೆ ಬಂದಿದೆ.

ಮುಡಾ ಆಯುಕ್ತ ಮನ್ಸೂರ್ ಆಲಿಗೆ ಬ್ರೋಕರ್ ಮೂಲಕ ನೀಡುತ್ತಿದ್ದ ಬರೋಬ್ಬರಿ ೨೫ ಲಕ್ಷ ರೂಪಾಯಿ ಹಣವನ್ನು ನೀಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ದೂರುದಾರರು ಮಂಗಳೂರು ತಾಲೂಕು ಕುಡುಪು ಗ್ರಾಮದ ಸರ್ವೇ ನಂ ೫೭/ಪಿ ರಲ್ಲಿನ ಒಟ್ಟು ೧೦.೮ ಎಕ್ರೆ ಜಮೀನನ್ನು ಖರೀದಿಸಿದ್ದು, ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪಚ್ಚನಾಡಿ ಮತ್ತು ಕುಡುಪು ಗ್ರಾಮಗಳ ಸುತ್ತಮುತ್ತ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ನಿರ್ವಹಣೆಯ ಘಟಕವನ್ನು ಭವಿಷ್ಯದಲ್ಲಿ ವಿಸ್ತರಿಸುವ ಬಗ್ಗೆ ಅವಶ್ಯವಾಗಿರುವ ಜಮೀನನ್ನು ಟಿ.ಡಿ.ಆರ್ ನಿಯಮದಡಿ ಖರೀದಿ ಮಾಡುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ದೂರುದಾರರಿಗೆ ಹಾಗೂ ಜಮೀನಿನ ಈ ಹಿಂದಿನ ಮಾಲಕರಿಗೆ ಪತ್ರ ವ್ಯವಹಾರವಾಗಿತ್ತು. ಅದರಂತೆ ಸದ್ರಿ ಜಮೀನು ೨೦೨೪ ಜನವರಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಹೆಸರಿಗೆ ನೊಂದಣಿಯಾಗಿರುತ್ತದೆ. ಬಳಿಕ ಮಹಾನಗರ ಪಾಲಿಕೆಯ ಆಯುಕ್ತರು ಟಿ.ಡಿ.ಆರ್ ನೀಡಲು ಮುಡಾ ಆಯುಕ್ತರಿಗೆ ಫೆಬ್ರವರಿ ತಿಂಗಳಲ್ಲಿ ಕಳುಹಿಸಿದ್ದು, ಮುಡಾ ಆಯುಕ್ತರಾದ ಮನ್ಸೂರ್ ಆಲಿರವರು ಈ ಫೈಲ್‌ನ್ನು ಪೆಂಡಿಂಗ್ ಇಟ್ಟಿದ್ದರು. ಈ ಬಗ್ಗೆ ಫಿರ್ಯಾದಿದಾರರು ಮುಡಾ ಆಯುಕ್ತರಾದ ಮನ್ಸೂರ್ ಆಲಿರವರ ಬಳಿ ಹೋಗಿ ಮಾತನಾಡಿದಾಗ ೨೫ ಲಕ್ಷ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತಂತೆ ಫಿರ್ಯಾದಿದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಶನಿವಾರ ಕಾರ್ಯಾಚರಣೆಗೆ ಪ್ಲ್ಯಾನ್ ಹಾಕಲಾಗಿತ್ತು.

ಶನಿವಾರ ಮುಡಾ ಆಯುಕ್ತರಾದ ಮನ್ಸೂರ್ ಆಲಿರವರ ನಿರ್ದೇಶನದಂತೆ ಬ್ರೋಕರ್ ಮಹಮ್ಮದ್ ಸಲಿಂ ಎಂಬಾತ ಪಿರ್ಯಾದುದಾರರಿಂದ ರೂ.೨೫,೦೦,೦೦೦ ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

೨೫ ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವ ಮೂಡಾ ಆಯುಕ್ತರಾದ ಮನ್ಸೂರ್ ಅಲಿರವರನ್ನು ಮತ್ತು ಲಂಚದ ಹಣವನ್ನು ಸ್ವೀಕರಿಸಿದ ಬೋಕರ್ ಮಹಮ್ಮದ್ ಸಲಿಂ ರವರನ್ನು ದಸ್ತಗಿರಿ ಮಾಡಲಾಗಿದೆ.

ಲೋಕಾಯುಕ್ತ ಪ್ರಭಾರ ಪೊಲೀಸ್ ಆಯುಕ್ತ ಚಲುವರಾಜು.ಬಿ, ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆದಿದ್ದು, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ.ಎ, ಸುರೇಶ್ ಕುಮಾರ್.ಪಿ ಇವರು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!