ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ಖತರ್ನಾಕ್ ದಂಪತಿ ಅಂದರ್

ಹೊಸದಿಗಂತ ವರದಿ,ಮಂಗಳೂರು:

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ಖತರ್ನಾಕ್ ದಂಪತಿ ಅಂದರ್
ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಕುಖ್ಯಾತ ಆರೋಪಿ ವಿಖ್ಯಾತ್ ಯಾನೆ ವಿಕ್ಕಿ ಬಪ್ಪಾಲ್(28) ಹಾಗೂ ಆತನ ಪತ್ನಿ ಅಂಜನಾ(21) ಎಂಬವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 22 ಸಾವಿರ ಮೌಲ್ಯದ ಗಾಂಜಾ ಸೇರಿದಂತೆ ಒಟ್ಟು 92 ಸಾವಿರ ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಆರೋಪಿಗಳು ಮಂಗಳೂರು ನಗರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಹಾಗೂ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್‌ಐ ರಾಜೇಂದ್ರ ಬಿ ನೇತೃತ್ವದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರಿನ ನಗರದ ಕಾವೂರು ಶಂಕರ ನಗರ ಕೆ ಸಿ ಆಳ್ವ ಲೇಔಟ್ ನ ಮನೆಯೊಂದಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಒಟ್ಟು 2,200 ಕೆ ಜಿ ತೂಕದ ರೂ. 22,000 ಮೌಲ್ಯದ ಗಾಂಜಾ, 1,500 ನಗದು, ಮೊಬೈಲ್ ಫೋನ್ ಮತ್ತು ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಗಾಂಜಾ ಮಾರಾಟ ಜಾಲದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿರುವ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ಆರೋಪಿಗಳ ಪೈಕಿ ವಿಖ್ಯಾತ್ ಯಾನೆ ವಿಕ್ಕಿ ಬಪ್ಪಾಲ್ ವಿರುದ್ದ ಈ ಹಿಂದೆ ಮಂಗಳೂರು ನಗರದ ದಕ್ಷಿಣ, ಉತ್ತರ, ಬರ್ಕೆ, ಉರ್ವಾ, ಗ್ರಾಮಾಂತರ, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆ ಯತ್ನ, ಜೀವ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಹಾಗೂ ಕಿಡ್ನಾಫ್ ಗೆ ಸಂಬಂಧಪಟ್ಟಂತೆ ಒಟ್ಟು 13 ಪ್ರಕರಣಗಳು ದಾಖಲಾಗಿವೆ. ಅಂಜನಾ ಎಂಬಾಕೆಯ ವಿರುದ್ಧ ಈ ಹಿಂದೆ ಕಂಕನಾಡಿ ನಗರ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಆರೋಪಿ ಹಾಗೂ ಆತನ ಪತ್ನಿ ಜೊತೆ ಸೇರಿಕೊಂಡು ಮಂಗಳೂರು ನಗರದ ಎಂ ಜಿ ರಸ್ತೆಯಲ್ಲಿರುವ ವಿದ್ಯಾಸಂಸ್ಥೆಗಳ ಪರಿಸರದಲ್ಲಿ, ಕೆಪಿಟಿ, ಕದ್ರಿ, ಜೆಪ್ಪು ಬಪ್ಪಾಲ್ ಪರಿಸರದಲ್ಲಿ ಗಾಂಜಾವನ್ನು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!