ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಕಟ್ಟಡಗಳನ್ನು ಮಣಿಪುರ ಸರ್ಕಾರ ತೆರವುಗೊಳಿಸಿದೆ. ತೌಬಲ್ ಅರಣ್ಯ ವಿಭಾಗದ ವೈಥೌ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶದಲ್ಲಿನ 69 ಮನೆಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ.
ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿದ ಮೂರು ದಿನಗಳ ನಂತರ ತೆರವು ಕಾರ್ಯಾಚರಣೆ ನಡೆದಿದೆ. ಸಭೆಯಲ್ಲಿ, ಅರಣ್ಯ ಇಲಾಖೆಯ ಜಮೀನನ್ನು ಅತಿಕ್ರಮಿಸುವ ಮತ್ತು ಅಕ್ರಮವಾಗಿ ಭೂಮಿ ಮಂಜೂರು ಮಾಡುವ ನಿದರ್ಶನಗಳ ಬಗ್ಗೆ ಸಿಎಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದ ವಿವಿಧ ಭಾಗಗಳಲ್ಲಿನ ಎಲ್ಲಾ ಅತಿಕ್ರಮಣಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಸೂಚನೆ ಬೆನ್ನಲ್ಲೇ ಅಕ್ರಮ ಕಟ್ಟಡಗಳ ತೆರವು ಕಾರ್ಯ ಶುರುವಾಗಿದೆ.
ಈ ಬಗ್ಗೆ ತೌಬಲ್ ಡಿಎಫ್ಒ ಲೋಕೇಂದ್ರೋ ಪ್ರತಿಕ್ರಿಯೆ ನೀಡಿದ್ದು, ವೈಥೌ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿನ ಅಕ್ರಮ ಕಟ್ಟಡಗಳನ್ನು ತೆರೆವುಗೊಳಿಸುವ ಕಾರ್ಯ ನಡೆಯುತ್ತಿದೆ. ವೈಥೌ ಅರಣ್ಯ ಪ್ರದೇಶದಲ್ಲಿ ಸುಮಾರು 180ಕ್ಕೂ ಹೆಚ್ಚು ಅಕ್ರಮ ಅತಿಕ್ರಮಣದಾರರು ನೆಲೆಸಿರುವುದು ಕಂಡುಬಂದಿದೆ. ಈಗಾಗಲೇ 71 ಅಕ್ರಮ ಪಟ್ಟದಾರರಿಗೆ ಶೋಕಾಸ್ ನೋಟಿಸ್ ಕಳುಹಿಸಲಾಗಿದ್ದು, 69ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿದ್ದೇವೆ. ಉಳಿದವುಗಳನ್ನು ಹಂತ-ಹಂತವಾಗಿ ತೆರವುಗೊಳಸಲಾಗುವುದು ಎಂದು ತಿಳಿಸಿದ್ದಾರೆ.