ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಾರಾತ್ರಿಯಲ್ಲಿ ಸದ್ದು ಮಾಡುತ್ತಿದ್ದ ಯುವಕರ ಗುಂಪಿಗೆ ರಾತ್ರಿಯಾಗಿದೆ ಮಲಗಲು ಬಿಡಿ, ಸದ್ದು ಮಾಡಬೇಡಿ ಎಂದು ಹೇಳಿದ್ದಕ್ಕೆ ಮ್ಯೂಸಿಶಿಯನ್ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಣಿಪುರದಲ್ಲಿ ನಡೆದಿದೆ. ದೆಹಲಿಯ ಆಶ್ರಮ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಣಿಪುರದ ಮ್ಯುಸಿಶಿಯನ್ ಚೋಂಗ್ಥಾಮ್ ವಿಕ್ರಮ್ ಸಿಂಗ್ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಎಂಟು ಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಯ ಹೊರಗೆ ಈ ಎಂಟು ಮಂದಿ ವಿಕ್ರಮ್ ಸಿಂಗ್ ಅವರಿಗೆ ಕಲ್ಲಿನಲ್ಲಿ ಹೊಡೆದು, ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ನಿನ್ನೆ ತಡರಾತ್ರಿ ತಮ್ಮ ಮನೆಯ ಬಳಿ ಯುವಕರ ಗುಂಪು ಗಲಾಟೆ ಮಾಡುತ್ತಿತ್ತು ಎಂದು ವಿಕ್ರಮ್ ಎದ್ದು ಕೆಳಕ್ಕೆ ಹೋಗಿದ್ದಾರೆ. ನಂತರ ಯುವಕರು ವಿಕ್ರಮ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಅವರು ಬಾಗಿಲು ತೆರೆಯಿರಿ ಎಂದು ಮನೆಯವರಿಗೆ ಕೇಳುವಂತೆ ಕೂಗಿದ್ದಾರೆ. ಆದರೆ ನಿದ್ದೆಯಲ್ಲಿದ್ದ ಕಾರಣ ಯಾರಿಗೂ ಸದ್ದು ಕೇಳಿಸಿಲ್ಲ.
ಚೆನ್ನಾಗಿ ಥಳಿಸಿದ ನಂತರ ಯುವಕರು ಪರಾರಿಯಾಗಿದ್ದಾರೆ. ವಿಕ್ರಮ್ ಅವರ ಮಗ ಯೈಫಾಬಾ ಹೊರಕ್ಕೆ ಬಂದು ನೋಡಿದಾಗ ತಂದೆಯ ಬಟ್ಟೆ ಹರಿದು ಹೋಗಿ ಮೈಯೆಲ್ಲಾ ರಕ್ತಸಿಕ್ತವಾಗಿ ಬಿದ್ದಿದ್ದರು ಎನ್ನಲಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ರಾಕ್ ಎಂಡ್ ರೂಟ್ಸ್ ಎನ್ನುವ ಬ್ಯಾಂಡ್ ಮೂಲಕ ಜನರ ಮನೆಮಾತಾಗಿದ್ದ ವಿಕ್ರಮ್ ಅವರು ದೆಹಲಿಯಲ್ಲಿ ಸಂಗೀತ ಶಾಲೆ ನಡೆಸುತ್ತಿದ್ದರು. ಭಾರತದ ಮೊದಲ ಬಾಫ್ಟಾ ಪ್ರಶಸ್ತಿ ವಿಜೇತ ಚಿತ್ರ ಬೂಂಗ್‌ನ ನಿರ್ದೇಶಕಿಯಾದ ಲಕ್ಷ್ಮಿಪ್ರಿಯಾ ಅವರ ಸೋದರ ಸಂಬಂಧಿಯಾಗಿದ್ದರು.
ದೆಹಲಿಯಲ್ಲಿರುವ ಮಣಿಪುರ ಸಂಘಟನೆಗಳು, ನ್ಯಾಯ ಸಿಗುವವರೆಗೂ ಮೃತದೇಹವನ್ನು ಮಣಿಪುರಕ್ಕೆ ಕಳಿಸುವಂತಿಲ್ಲ ಎಂದು ಪ್ರತಿಭಟನೆಗೆ ಕುಳಿತಿದ್ದಾರೆ. ಅಂತ್ಯಕ್ರಿಯೆ ಮುಗಿದುಹೋದರೆ ಯಾರೂ ಈ ಕೇಸ್ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ. ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.



