ಹೊಸದಿಗಂತ ವರದಿ ಬಳ್ಳಾರಿ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆಯ ಬೃಹತ್ ಸಮಾವೇಶ ಸೆ.10ರಂದು ಬಳ್ಳಾರಿಯಲ್ಲಿ ನಡೆಯಲಿದ್ದು, ಸಮಾವೇಶದ ಸ್ಥಳಕ್ಕೆ ಜಿಲ್ಲಾಡಳಿತ ಅನುಮತಿ ನೀಡದಿರುವುದು ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದೆ.
ಬಳ್ಳಾರಿ ಚಲೋ ಪಾದಯಾತ್ರೆ ಸೆ.9 ರಂದು ಸಂಜೆ ಬಳ್ಳಾರಿ ತಲುಪಲಿದ್ದು, ಸೆ.10 ರಂದು ಮಧ್ಯಾಹ್ನ 2ಕ್ಕೆ ನಗರದ ಹೃದಯ ಭಾಗ ಸರ್ಕಾರಿ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಿಜೆಪಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ. ಆದರೆ, ಈ ಕುರಿತು ಜಿಲ್ಲಾ ಬಿಜೆಪಿ ಮನವಿಯನ್ನು ಜಿಲ್ಲಾಡಳಿತ ತಿರಸ್ಕರಿಸಿದ್ದು, ಸರ್ಕಾರದ ಹೊಸ ಶಿಕ್ಷಣ ನೀತಿಯಂತೆ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಸಲು ಅನುಮತಿ ನೀಡಲು ಆಗೋಲ್ಲ ಎಂದು ತಿಳಿಸಿದ್ದು, ಬಿಜೆಪಿ ನಾಯಕರು, ಮುಖಂಡರನ್ನು ಕೆರಳಿಸಿದೆ.

ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ
ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಸೆ.10 ರಂದು ಬಳ್ಳಾರಿಯಲ್ಲಿ ಆಯೋಜಿಸಿದ ಬಹಿರಂಗ ಸಮಾವೇಶದ ಸ್ಥಳಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿರುವುದು ಸರಿಯಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟದ ದ್ವನಿ ಹತ್ತಿಕ್ಕುವ ಕೆಲಸ ಮಾಡುವುದು ಸರಿಯಲ್ಲ, ಡಿಸಿ ಅವರು ಸರ್ಕಾರದ ಒತ್ತಡಕ್ಕೆ ಮಣಿಯದೇ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ, ಹೋರಾಟವನ್ನು ಹತ್ತಿಕ್ಕುವ ಕೆಲಸ ಯಾರಿಂದಲೂ ಆಗಬಾರದು, ನಮ್ಮ ಜನರಪರ ಹೋರಾಟಕ್ಕೆ ಜನರಿಂದ ಅಭೂತಪೂರ್ವ ಬೆಂಬಲ ದೊರೆತಿದ್ದು, ಮುಳುಗುವ ಹಡಗಿನಂತಾದ ಕಾಂಗ್ರೆಸ್ ನ ನಾಯಕರಿಗೆ ನಡುಕ ಶುರುವಾಗಿದೆ. ರಾಜ್ಯದ ಜನರೇ ಅವರಿಗೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಜನರ ಧ್ವನಿ ಅಡಗಿಸುವ ಪ್ರಯತ್ನ
ಈ ಬಗ್ಗೆ ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ಜನರ ಧ್ವನಿಯನ್ನು ಅಡಗಿಸಲು ಜಿಲ್ಲಾಡಳಿತ ಸಮಾವೇಶದ ಸ್ಥಳಕ್ಕೆ ಪರವಾನಿಗೆ ನೀಡದಿರುವುದು ಅತ್ಯಂತ ಖಂಡನೀಯ. ಪರವಾನಿಗೆ ನಿರಾಕರಿಸಿದರೆ ಜನರ ದನಿಯನ್ನು ಅಡಗಿಸಬಹುದು ಎಂದು ಕಾಂಗ್ರೆಸ್ ಅಂದುಕೊಂಡಿದ್ರೆ, ಭಾವಿಸಿದ್ರೆ ಅದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಯತೀoದ್ರ ಸಿದ್ದರಾಮಯ್ಯ ಅವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಿ.ಟಿ.ರವಿ, ಕಷ್ಟ ಪಡದೇ ಸಚಿವ ಯತೀoದ್ರ ಸಿದ್ದರಾಮಯ್ಯಗೆ ಸಚಿವ ಸ್ಥಾನ ದೊರೆತಿದೆ, ಅವರ ತಂದೆಯ ಹೆಸರಿನಲ್ಲಿ ಅವರಿಗೆ ಅಧಿಕಾರ ಸಿಕ್ಕಿದೆ, ಅಧಿಕಾರ ಯಾರಿಗೂ ಶಾಶ್ವತವಲ್ಲ, ಆಲೋಚನೆ ಮಾಡಿ ಮಾತಾಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ಗೆ ಒಂದು ನಿಯಮ, ಬಿಜೆಪಿಗೊಂದು ನಿಯಮನಾ?
ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಸಮಾವೇಶ, ಕಾಂಗ್ರೆಸ್ ನ ಅನೇಕ ಸಭೆ ಸಮಾರಂಭಗಳು ಇದೇ ಸ್ಥಳದಲ್ಲೇ ನಡೆದಿದ್ದು, ಕಾಂಗ್ರೆಸ್ ನವರಿಗೆ ಒಂದು ನಿಯಮ, ಬಿಜೆಪಿ ಅವರಿಗೊಂದು ನಿಯಮನಾ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ. ಈ ಕುರಿತು ಬಿಜೆಪಿ ಅವರ ಮನವಿಯನ್ನು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿರಸ್ಕರಿಸಿದ್ದು, ಹಗ್ಗಜಗ್ಗಾಟ ಮುಂದುವರೆದಿದೆ.
ಇದನ್ನೂ ಓದಿ:
ಸ್ಥಳದಲ್ಲಿ ಈಗಾಗಲೇ ಬಿಜೆಪಿ ಸಮಾವೇಶ ವೇದಿಕೆ ನಿರ್ಮಿಸಲು ಸಾಮಗ್ರಿಗಳನ್ನು ಹೊತ್ತು ತಂದಿರುವ 4-5 ಲಾರಿಗಳು ಬೀಡು ಬಿಟ್ಟಿದ್ದು, ಸುಮಾರು 80 ಸಾವಿರಕ್ಕೂ ಹೆಚ್ಚು ಆಸನಗಳ ಬೃಹತ್ ವೇದಿಕೆ ನಿರ್ಮಿಸಲು ಮುಂದಾಗಿದ್ದರು. ಒಂದು ವೇಳೆ ಪರವಾನಿಗೆ ದೊರೆಯದಿದ್ದರೆ ಪರ್ಯಾಯವಾಗಿ ಬೇರೆ ಸ್ಥಳ ಹುಡುಕಾಟಕ್ಕೆ ಬಿಜೆಪಿ ಮುಂದಾಗಿದೆ. ಸ್ಥಳೀಯ ಬಿಜೆಪಿ ನಾಯಕರು ಅದೇ ಸ್ಥಳದಲ್ಲೇ ಬಹಿರಂಗ ಸಮಾವೇಶ ಮಾಡೋಣ ಎಂದು ಪಟ್ಟು ಹಿಡಿದಿದ್ದಾರೆ.



