Sunday, October 1, 2023

Latest Posts

ಮಣಿಪುರದ ಗಲಭೆಗೆ ಕಾಂಗ್ರೆಸ್ ಸರಕಾರದ ದಿವ್ಯ ನಿರ್ಲಕ್ಷ್ಯ ಕಾರಣ: ಚಕ್ರವರ್ತಿ ಸೂಲಿಬೆಲೆ

ಹೊಸದಿಗಂತ ವರದಿ ಕುಶಾಲನಗರ:

ಮಣಿಪುರದಲ್ಲಿ ಇತ್ತೀಚೆಗೆ ಸಂಭವಿಸಿದ ಜನಾಂಗೀಯ ಗಲಭೆ ತಾರಕಕ್ಕೇರಲು ಈ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರದ ದಿವ್ಯ ನಿರ್ಲಕ್ಷ್ಯ ಕಾರಣ ಎಂದು ಚಿಂತಕ, ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಕುಶಾಲನಗರದ ಪ್ರಜ್ಞಾ ಕಾವೇರಿ ವೇದಿಕೆ ಆಶ್ರಯದಲ್ಲಿ ಇಲ್ಲಿನ ಗಾಯತ್ರಿ ಕಲ್ಯಾಣಮಂಟಪದಲ್ಲಿ ನಡೆದ ‘ಉರಿಯುತ್ತಿದೆ ಮಣಿಪುರ-ಏನಿದಕ್ಕೆ ಪರಿಹಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನುಸುಳುಕೋರರ‌ ನಡುವೆ ಮಣಿಪುರದ ಮೂಲ ನಿವಾಸಿಗಳು‌ ನಲುಗಿ‌ ಹೋಗಿದ್ದಾರೆ.

ನಾಗಾಲ್ಯಾಂಡ್, ಮಿಜೋರಾಂ, ಅಸ್ಸಾಂ ಮಾತ್ರವಲ್ಲದೆ ನೆರೆಯ ಮಯನ್ಮಾರ್’ನಿಂದ ನುಸುಳಿ ಬರುತ್ತಿರುವ ಕುಕೀಗಳ ನಡುವೆ ಸಿಲುಕಿದ ಮಣಿಪುರದ ಹಿಂದೂಗಳು ಭಯೋತ್ಪಾದನೆ, ಮತಾಂತರ, ಪ್ರತ್ಯೇಕತೆಯ ಕೂಗಿನ ನಡುವೆ ತಮ್ಮ ಅಸ್ತಿತ್ವಕ್ಕಾಗಿ ಸದಾ ಹೋರಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸುದೀರ್ಘ ಎರಡು ಸಾವಿರ ವರ್ಷಗಳ ರಾಜರ ಆಳ್ವಿಕೆಯ ಪರಂಪರೆ ಹೊಂದಿರುವ ಮಣಿಪುರದ ಹಿಂದೂಗಳು‌‌ ನೂರಕ್ಕೆ‌ ನೂರು ಪ್ರತಿಶತ ಸನಾತನಿಗಳು. ಆದರೆ ಶೇ.90ರಷ್ಟಿದ್ದ ಮಣಿಪುರದ ಹಿಂದೂಗಳ ಸಂಖ್ಯೆ ಇಂದು ಶೇ. 50ಕ್ಕೆ ಇಳಿಮುಖಗೊಂಡಿದೆ ಎಂದು ಅವರು ವಿಷಾದಿಸಿದರು.

ಓಟ್ ಬ್ಯಾಂಕ್ ದೃಷ್ಟಿಯಿಂದ ನುಸುಳುಕೋರರನ್ನು ತಡೆಯದೆ, ಪೋಷಿಸಿ ಬೆಳೆಸಿದ‌ ಕೀರ್ತಿ ಕಾಂಗ್ರೆಸ್ ಸರಕಾರಕ್ಕೆ ಸಲ್ಲಬೇಕು ಎಂದು ಅವರು ಇದೇ ಸಂದರ್ಭ ಆರೋಪಿಸಿದರು. ನುಸುಳುಕೋರ ಕುಕೀ ಸಮುದಾಯಕ್ಕೆ ಅಕ್ರಮವಾಗಿ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ನೀಡುವ ಪ್ರಕರಣಗಳು ಅಲ್ಲಿ ನಿರಂತರವಾಗಿ ನಡೆಯುತ್ತಿದ್ದು,ಇದರಿಂದಾಗಿ ಗಲಭೆಕೋರ ಕುಕೀ ಸಮುದಾಯದ ಜನಸಂಖ್ಯೆ ಪ್ರಮಾಣ ಏರಿಕೆಯಾಗಲು ಕಾರಣವಾಗಿದೆ ಎಂದು ಅವರು ವಿಶ್ಲೇಷಿಸಿದರು.

ಜಾತಿ ಹಸರನ್ನು ಬಳಸಿ ದೇಶ ವಿಭಜನೆ ಆಗುವ ರೀತಿಯ ಜಾತಿವಾರು ವರದಿ ಹೊರಬಿದ್ದ ಬೆನ್ನಲ್ಲೇ ಮಣಿಪುರದಲ್ಲಿ ಆತಂಕಕಾರಿ‌ ಬೆಳವಣಿಗೆ ಕಂಡು ಬಂದಿದ್ದು, ಮಣಿಪುರವನ್ನು ಪ್ರಯೋಗಶಾಲೆಯನ್ನಾಗಿ ಬಳಸುವ ಪ್ರಯತ್ನ ಕೆಲವರಿಂದ‌ ನಡೆಯುತ್ತಿದೆ ಎಂದು ಸೂಲಿಬೆಲೆ ದೂರಿದರಲ್ಲದೆ, ಇದೇರೀತಿ ಮುಂದುವರಿದಲ್ಲಿ ದೇಶದ ವಿವಿಧೆಡೆ ಅಂತಹ ಘಟನೆಗಳು ಮರುಕಳಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಣಿಪುರದ ಸಂಸ್ಕೃತಿ ವಿದ್ಯಾಲಯದ ಕಲಾ ಅಕಾಡೆಮಿ ಯುವ ಪ್ರತಿಭಾ ಪ್ರಶಸ್ತಿ ಪುರಸ್ಕೃತೆ ಡಾ.ಉರ್ಮಿಕಾ ಮಾಯ್ಬಾನೆ ಮಾತನಾಡಿ, ಹಲವು ಕ್ಷೇತ್ರಗಳಲ್ಲಿ ತನ್ನದೇ ವಿಶೇಷ ಛಾಪು ಮೂಡಿಸಿದ್ದ ಮಣಿಪುರದ ಪ್ರಸ್ತುತ ಘಟನಾವಳಿಗಳು ಆತಂಕಕಾರಿ ವಿಚಾರ ಎಂದರಲ್ಲದೆ, ಇತ್ತೀಚೆಗೆ ‌ನಡೆದ ಅಹಿತಕರ ಬೆಳವಣಿಗೆಗಳು, ಅಲ್ಲಿನ ವರ್ಗೀಯ ಸಂಘರ್ಷಗಳ ಬಗ್ಗೆ ಸವಿವರ ಮಾಹಿತಿ ನೀಡಿದರು.

ಮಣಿಪುರದ ಪ್ರಮುಖರಾದ ಮೋತಿಮಾಲ ಗ್ಯಾಂಗಂ ಅವರು ಮಣಿಪುರದಲ್ಲಿನ ಪ್ರಸಕ್ತ ಪರಿಸ್ಥಿತಿಯ ಕುರಿತು ವಿವರಿಸಿ ಮಹಿಳೆಯರ ಮೇಲೆ ಅತ್ಯಾಚಾರ, ಮೃಗೀಯ ವರ್ತನೆ ನಿರಂತರವಾಗಿ ನಡೆಯುತ್ತಿದೆ ಎಂದು ಅಳಲು ತೋಡಿಕೊಂಡರು. ಪ್ರಜ್ಞಾ ಕಾವೇರಿ ಸಂಸ್ಥಾಪಕ ಸಂಯೋಜಕ ಜಿ.ಟಿ.ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!