ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಂದು ಯಾತ್ರೆಗೆ ಮುಂದಾಗಿದ್ದು, ಈ ಬಾರಿ ದೇಶದ ಈಶಾನ್ಯ ಮತ್ತು ಪಶ್ಚಿಮ ಭಾಗಗಳನ್ನು ಸಂಪರ್ಕಿಸುವ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ.
ಜನವರಿ 14 ರಿಂದ ಮಣಿಪುರದಿಂದ ಮುಂಬೈಗೆ 6,200 ಕಿಮೀ ಪ್ರವಾಸವನ್ನು ‘ಭಾರತ್ ನ್ಯಾಯ ಯಾತ್ರೆ’ ಹೆಸರಲ್ಲಿ ರಾಹುಲ್ ಗಾಂಧಿ ಪ್ರವಾಸ ಮಾಡಲಿದ್ದಾರೆ. ಮಾರ್ಚ್ 20 ರಂದು ಮುಕ್ತಾಯಗೊಳ್ಳಲಿರುವ ಯಾತ್ರೆಯನ್ನು ಕಳೆದ ವರ್ಷ ಅವರ ಉತ್ತರ – ದಕ್ಷಿಣ ಭಾರತ್ ಜೋಡೋ ಯಾತ್ರೆಯ ಎರಡನೇ ಮತ್ತು ಪೂರ್ವ-ಪಶ್ಚಿಮ ಹಂತ ಎಂದು ಕರೆಯಲಾಗಿದೆ.
ಇಂಫಾಲ್ನಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ‘ಭಾರತ ನ್ಯಾಯ ಯಾತ್ರೆ’ಗೆ ಚಾಲನೆ ನೀಡಲಿದ್ದು, ಇದು 14 ರಾಜ್ಯಗಳು ಮತ್ತು 85 ಜಿಲ್ಲೆಗಳನ್ನು ಒಳಗೊಳ್ಳಲಿದೆ. ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಛತ್ತೀಸ್ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ರಾಹುಲ್ ಗಾಂಧಿ ಯಾತ್ರೆ ಒಳಗೊಳ್ಳಲಿದೆ. ಬಸ್ ಸವಾರಿ ಹಾಗೂ ಪಾದಯಾತ್ರೆ ಎರಡನ್ನೂ ಈ ಯಾತ್ರೆ ಹೊಂದಿದೆ.
ಭಾರತ ನ್ಯಾಯ ಯಾತ್ರೆಯು ದೇಶದ ಜನರಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ಭದ್ರಪಡಿಸುವುದಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಹಿಂಸಾಚಾರ ಪೀಡಿತ ಮಣಿಪುರವನ್ನು ಆರಂಭಿಕ ಹಂತವಾಗಿ ಕೈ ಪಕ್ಷ ಆರಿಸಿಕೊಂಡಿದ್ದು, ಪಕ್ಷವು ಜನರ ಗಾಯಗಳನ್ನು ಗುಣಪಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಬಯಸಿದೆ ಎಂದು ಹೇಳಿದೆ.
ರಾಹುಲ್ ಗಾಂಧಿ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕನ್ಯಾಕುಮಾರಿಯಿಂದ ತಮ್ಮ ಭಾರತ್ ಜೋಡೋ ಯಾತ್ರೆಯನ್ನು ಕೈಗೊಂಡಿದ್ದರು. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದ ಐದು ತಿಂಗಳ ಪಾದಯಾತ್ರೆ ಜನವರಿಯಲ್ಲಿ ಶ್ರೀನಗರದಲ್ಲಿ ಕೊನೆಗೊಂಡಿತು.