ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರ ಹಿಂಸಾಚಾರದಿಂದ ನಿರ್ಬಂಧ ಹೇರಲಾಗಿದ್ದ ಇಂಟರ್ನೆಟ್ ವ್ಯವಸ್ಥೆಯನ್ನು ಮತ್ತೆ ಯಥಾಸ್ಥಿತಿಗೆ ತರಲು ಸರಕಾರ ನಿರ್ಧರಿಸಿದೆ.
ಮೇ 3ರಂದು ಜನಾಂಗೀಯ ಘರ್ಷಣೆಗಳು ಭುಗಿಲೆದ್ದು, ನಂತರ ಅದು ವಿಕೋಪಕ್ಕೆ ಹೋಗಿ ಹಲವು ಅಹಿತಕರ ಘಟನೆಗಳು ನಡೆದು ಇಡೀ ರಾಜ್ಯವೇ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಅಲ್ಲಿನ ಅನೇಕರು ಮನೆ-ಪ್ರಾಣ ಎಲ್ಲವನ್ನು ಕಳೆದುಕೊಂಡಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಮಣಿಪುರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಮತ್ತೆ ಹಿಂಸಾಚಾರಕ್ಕೆ ಕಾರಣವಾಗುತ್ತಿತ್ತು. ಈ ಪುಕಾರುಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಇಂಟರ್ನೆಟ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಈ ನಿರ್ಬಂಧವನ್ನು ತೆರವು ಮಾಡಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ (biren singh) ಅವರು ಇಂದು (ಸೆ.23) ಹೇಳಿದ್ದಾರೆ.
ಸೆ.22ರಿಂದ 15 ದಿನಗಳೊಳಗೆ ತಮ್ಮಲ್ಲಿರುವ ಅಕ್ರಮ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸುವಂತೆ ಸೂಚನೆ ನೀಡಿದ ನಂತರ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಒಂದು ವೇಳೆ ಸರ್ಕಾರ ತಿಳಿಸಿದ 15 ದಿನಗಳೊಳಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸದಿದ್ದರೆ. ಕೇಂದ್ರ ಮತ್ತು ರಾಜ್ಯದ ಎರಡೂ ಭದ್ರತಾ ಪಡೆಗಳು ರಾಜ್ಯದಾದ್ಯಂತ ಕಾರ್ಯಚರಣೆ ನಡೆಸಲಾಗುವುದು. ಜತೆಗೆ ಕಾನೂನು ಪ್ರಕಾರ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪ್ರಕಟಣೆ ಹೇಳಿದೆ. ಈ ಶಸ್ತ್ರಾಸ್ತ್ರ ಹಿಡಿದುಕೊಂಡು ಅನೇಕ ದುಷ್ಕರ್ಮಿಗಳು/ಗುಂಪುಗಳು ಜನರ ಮೇಲೆ ದಾಳಿ ಮಾಡುತ್ತಿದೆ. ರಾಜ್ಯದಲ್ಲಿ ಇದರಿಂದ ಸುಲಿಗೆ, ಬೆದರಿಕೆ ಮತ್ತು ಅಪಹರಣಗಳ ಪ್ರಕರಣ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಘಟನೆಗಳು ಕಂಡು ಬಂದರೆ ಖಂಡಿತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.