SHOCKING| ಮಣಿಪುರ ಹಿಂಸಾಚಾರ: ನಿರಾಶ್ರಿತರಾದ 50 ಸಾವಿರ ಜನ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಣಿಪುರದಲ್ಲಿ ಹಿಂಸಾಚಾರ ಬೂದಿ ಮುಚ್ಚಿದ ಕೆಂಡದಂತಿದೆ. ನಡುವೆ ಕೊಂಚ ಶಾಂತವಾಗಿದ್ದರೂ ಹಲವು ಪ್ರದೇಶಗಳಲ್ಲಿ ಮತ್ತೆ ಹಿಂಸಾಚಾರ, ಗುಂಡಿನ ದಾಳಿ ನಡೆದಿದೆ. ಏತನ್ಮಧ್ಯೆ, ರಾಜ್ಯಾದ್ಯಂತ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಜೂನ್ 15 ರವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತರ ಈ ಆದೇಶ ಹೊರಬಿದ್ದಿದೆ. ಇದೇ ವೇಳೆ ಹಿಂಸಾಚಾರದಿಂದ 50 ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ಹಿಂಸಾಚಾರದ ಸಂತ್ರಸ್ತರಿಗಾಗಿ ರಾಜ್ಯಾದ್ಯಂತ 349 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ಮಣಿಪುರ ಸರ್ಕಾರ ಭಾನುವಾರ ತಿಳಿಸಿದೆ. 50,000 ಕ್ಕೂ ಹೆಚ್ಚು ಜನರು ವಿವಿಧ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಇದಲ್ಲದೆ, ಮಹಿಳೆಯರು, ವೃದ್ಧರು ಮತ್ತು ಮಕ್ಕಳಿಗೆ ಪ್ರತ್ಯೇಕ ಪರಿಹಾರ ಶಿಬಿರಗಳನ್ನು ಸಹ ಸ್ಥಾಪಿಸಲಾಗಿದೆ. ನೋಡಲ್ ಅಧಿಕಾರಿಗಳಿಗೆ ಇಲ್ಲಿ ಕಾಳಜಿ ವಹಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ.

ಮೇ 3 ರಿಂದ ಮಣಿಪುರದಲ್ಲಿ ಇಂಟರ್ನೆಟ್ ನಿಷೇಧ
ಹಿಂಸಾಚಾರದ ಹಿನ್ನೆಲೆಯಲ್ಲಿ ಮೇ 3 ರಂದು ಮಣಿಪುರದಲ್ಲಿ ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಲಾಗಿದೆ. ಜೂನ್ 10 ರಂದು ಮಣಿಪುರ ಗೃಹ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ, ನಿಷೇಧವನ್ನು ಜೂನ್ 15 ರವರೆಗೆ ವಿಸ್ತರಿಸಲಾಗಿದೆ. ಆಯುಕ್ತರು ಹೊರಡಿಸಿರುವ ಆದೇಶದಲ್ಲಿ, ಅಂತರ್ಜಾಲವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಮಾಜಘಾತುಕ ಶಕ್ತಿಗಳು ದ್ವೇಷವನ್ನು ಹರಡಲು ಯತ್ನಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷದ ಭಾಷಣ ಮತ್ತು ದ್ವೇಷದ ವೀಡಿಯೊಗಳು ಹರಡುವುದನ್ನು ಗಮನದಲ್ಲಿಟ್ಟುಕೊಂಡು, ನಿಷೇಧವನ್ನು ವಿಸ್ತರಿಸಲಾಗಿದೆ.

ಮಣಿಪುರ ಹಿಂಸಾಚಾರದ ಬಗ್ಗೆ ಸಿಬಿಐ ತನಿಖೆ
ಮಣಿಪುರ ಹಿಂಸಾಚಾರ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ ಸ್ಥಾಪಿಸಿದ 10 ಸದಸ್ಯರ ಎಸ್‌ಐಟಿ ತಂಡವು ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ 6 ಎಫ್‌ಐಆರ್‌ಗಳು ದಾಖಲಾಗಿವೆ. ಇವುಗಳಲ್ಲಿ ಐದು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿವೆ. ಗುವಾಹಟಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಅಜಯ್ ಲಂಬಾ ನೇತೃತ್ವದ ತನಿಖಾ ಆಯುಕ್ತರಿಗೆ ಸಿಬಿಐ ತನಿಖೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ವಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!