ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಳ್ಳಂಬೆಳಗ್ಗೆ ಶಸ್ತ್ರಸಜ್ಜಿತ ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಮಣಿಪುರದಲ್ಲಿ ನಡೆದಿದೆ. ಮಣಿಪುರ ಬೂದಿ ಮುಚ್ಚದ ಕೆಂಡದಂತಿದ್ದು, ಇಂದು ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.
ಮಣಿಪುರದ ಉಖ್ರುಲ್ ಜಿಲ್ಲೆಯ ತೊವೈ ಕುಕಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ 4.30ರ ಸಮಯದಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿಯ ನಂತರ ಗ್ರಾಮಸ್ಥರು ಮೂರು ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಮೃತರನ್ನು ಜಮ್‌ಖೋಗಿನ್ ಹಕಿಪ್ (26), ತಂಗ್‌ಖೋಕೈ ಹಕಿಪ್ (35) ಮತ್ತು ಹೊಲೆನ್ಸನ್ ಬೈಟ್ (24) ಎಂದು ಗುರುತಿಸಲಾಗಿದೆ.
ಈ ಘಟನೆಯು ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಸಮಸ್ಯೆಗೆ ಸಂಬಂಧಿಸಿದೆ. ಕೆಲವು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗ್ರಾಮಕ್ಕೆ ಪ್ರವೇಶಿಸಿ, ಗ್ರಾಮದ ಕಾವಲು ಕಾಯುತ್ತಿದ್ದ ಈ ಮೂವರಿಗೆ ಗುಂಡು ಹಾರಿಸಲಾಯಿತು.
ಮೇ 3ರಿಂದ ಮಣಿಪುರದಲ್ಲಿ ಘರ್ಷಣೆಗಳು ನಡೆಯುತ್ತಲೇ ಇವೆ. ಇದುವರೆಗೂ 120 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದಾಗಿ ಅಂದಾಜಿಸಲಾಗಿದೆ. ಹಿಂಸಾಚಾರ ಘಟನೆಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಣಿಪುರ ರಾಜ್ಯದಲ್ಲಿ ಹಿಂಸಾಚಾರವನ್ನು ನಿಯಂತ್ರಿಸಲು ಮತ್ತು ಸಹಜ ಸ್ಥಿತಿಗೆ ಮರಳಲು ಸ್ಥಳೀಯ ಪೊಲೀಸರೊಂದಿಗೆ 40,000 ಕೇಂದ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.